ಇಂಫಾಲ್: ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗಿನ ಸಭೆಯ ನಂತರ ರಾಜ್ಯ ಸಚಿವಾಲಯದಿಂದ ಹಿಂದಿರುಗುತ್ತಿದ್ದಾಗ ಗುರುವಾರ ಇಂಫಾಲ್‌ನಲ್ಲಿ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೈತೆ ಸಮುದಾಯದ ನಡುವೆ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ಇದರ ನಡುವೆ ಈ ಘಟನೆ ನಡೆದಿದೆ.
ಫೆರ್ಜಾಲ್ ಜಿಲ್ಲೆಯ ಥಾನ್ಲೋನ್ ನಿಂದ ಮೂರು ಬಾರಿ ಶಾಸಕರಾಗಿರುವ ವಾಲ್ಟೆ ಅವರು ಇಂಫಾಲ್ ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ.
ಇದನ್ನೂ ಓದಿ:Karnataka Election; ಎಂಇಎಸ್ ನಿಂದ ಜನರ ಭಾವನೆಗಳನ್ನು ಕೆರಳಿಸುವ ಕಾರ್ಯ: ಸಿಎಂ ಬೊಮ್ಮಾಯಿ
ಶಾಸಕ ಮತ್ತು ಅವರ ಚಾಲಕನ ಮೇಲೆ ಆಕ್ರೋಶಗೊಂಡ ಗುಂಪು ಹಲ್ಲೆ ನಡೆಸಿದ್ದು, ಅವರ ಪಿಎಸ್‌ಒ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವುಂಗ್‌ಜಾಗಿನ್ ವಾಲ್ಟೆ ಕುಕಿ ಸಮುದಾಯದಿಂದ ಬಂದವರು. ಅವರು ಕಳೆದ ಬಿಜೆಪಿ ಸರ್ಕಾರದಲ್ಲಿ ಮಣಿಪುರದ ಬುಡಕಟ್ಟು ವ್ಯವಹಾರಗಳು ಮತ್ತು ಹಿಲ್ಸ್ ಸಚಿವರಾಗಿದ್ದರು.