ಮುದ್ದೇಬಿಹಾಳ: ನಮಗೆ ಬಿಜೆಪಿಯವರು ಸದಸ್ಯತ್ವ ಕೊಟ್ಟಿಲ್ಲ. ನಮ್ಮ ವಾರ್ಡಿನ ಜನ ಆಯ್ಕೆ ಮಾಡಿ ಸದಸ್ಯರನ್ನಾಗಿ ಮಾಡಿದ್ದಾರೆ. ನಾವು ಭ್ರಷ್ಟರು ಅನ್ನೋದನ್ನ ನಮ್ಮನ್ನು ಆಯ್ಕೆ ಮಾಡಿದ ಜನ, ತನಿಖೆ ನಡೆಸಿದ ಅಧಿಕಾರಿಗಳು ಹೇಳಬೇಕು. ಬಿಜೆಪಿ ಸದಸ್ಯರು ಹೇಳಿದರೆ ನಾವು ಭ್ರಷ್ಟರಾಗೋಲ್ಲ. ಅವರದ್ದೇ ಸದಸ್ಯತ್ವ ರದ್ದುಪಡಿಸುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯ ನಾವು ಠರಾವು ಸ್ವೀಕರಿಸುತ್ತೇವೆ ಎಂದು ಧರಣಿ ನಿರತ ಸದಸ್ಯರಾದ ಶಿವು ಶಿವಪುರ, ಮಹಿಬೂಬ ಗೊಳಸಂಗಿ ಖಾರವಾಗಿ ಹೇಳಿದರು.
ಧರಣಿ ಸ್ಥಳದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸದಸ್ಯರಿಗೆ ಭ್ರಷ್ಟ ಅಧಿಕಾರಿಗಳು ಉಳಿಯಬೇಕಾಗಿದೆ. ನಾವು ಭ್ರಷ್ಟರಾಗಿದ್ದರೆ ದಾಖಲೆ ಇಟ್ಟುಕೊಂಡು ನಾವು ನಡೆಸುತ್ತಿರುವಂತೆ ಅವರೂ ಹೋರಾಟ ನಡೆಸಲಿ, ನಮ್ಮ ಸದಸ್ಯತ್ವ ರದ್ದು ಮಾಡಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಬಿಜೆಪಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿದ್ದಾಗ ಕೇವಲ ಇಬ್ಬರು ಸದಸ್ಯರು ಮಾತ್ರ ಮಾತನಾಡಿದ್ದಾರೆ. ಉಳಿದವರೆಲ್ಲ ಸುಮ್ಮನೆ ಕುಳಿತಿದ್ದರು. ಪತ್ರಿಕಾಗೋಷ್ಠಿ ಮುಗಿದ ಮೇಲೆ ನಮ್ಮನ್ನು ಸಂಪರ್ಕಿಸಿ ತಮ್ಮ ಅಸಹಾಯಕತೆ ತೋಡಿಕೊಂಡರು. ತಮ್ಮನ್ನು ಬಲವಂತವಾಗಿ ಕರೆಸಿ ಕೂಡಿಸಲಾಗಿತ್ತು ಎಂದು ಹೇಳಿದರು. ಅಲ್ಲಿ ಮಾತನಾಡಿದವರು ಮುಖ್ಯಾಧಿಕಾರಿ ಬರೆದುಕೊಟ್ಟ ಮಾಹಿತಿಯನ್ನೇ ಓದಿ ಹೇಳಿದ್ದಾರೆ ಹೊರತು ತಮ್ಮಿಚ್ಛೆಯಂತೆ ಮಾತನಾಡಿಲ್ಲ ಎಂದು ದೂರಿದರು.
ನಾವು 12 ಬೇಡಿಕೆ ಮುಂದಿಟ್ಟು ಧರಣಿ ನಡೆಸುತ್ತಿದ್ದೇವೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿ ರಚಿಸಿದ್ದ ತಂಡ ಅದರಲ್ಲಿ 4 ಅಂಶಗಳ ಕುರಿತು ವರದಿ ನೀಡಿದ್ದು ಮುಖ್ಯಾ ಧಿಕಾರಿ ತಪ್ಪಿತಸ್ಥರು ಎಂದು ತಿಳಿಸಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಈ ತನಿಖಾ ವರದಿಯೇ ಯಾರು ಭ್ರಷ್ಟರು ಅನ್ನೋದನ್ನು ತೋರಿಸಿಕೊಡುತ್ತದೆ. ಇದನ್ನು ತಿಳಿಯದೆ ಬಿಜೆಪಿ ಸದಸ್ಯರು ಮಾತನಾಡಿದ್ದಾರೆ. ತನಿಖಾ ವರದಿಯಂತೆ ಮುಖ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅವಧಿ ಮುಗಿದಿದ್ದರೂ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಪುರ, ಸ್ಥಾಯಿ ಸಮಿತಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೂ ನಾನೇ ಅಧ್ಯಕ್ಷ. ಮುಖ್ಯಾಧಿಕಾರಿ ಸಾಮಾನ್ಯ ಸಭೆ ಕರೆದು, ವಿಷಯ ಚರ್ಚೆಗಿಟ್ಟು ಠರಾವು ಸ್ವೀಕಾರಗೊಂಡ ಮೇಲೆ ನನ್ನ ಅವಧಿ ಮುಗಿಯುತ್ತದೆ. ಇದು ಗೊತ್ತಿದ್ದರೂ ಬಿಜೆಪಿ ಹಿರಿಯ ಸದಸ್ಯರೊಬ್ಬರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇವೆಯೇ ಹೊರತು ನಮ್ಮ ವೈಯುಕ್ತಿಕ ವಿಷಯಕ್ಕಾಗಿ ಅಲ್ಲ. ಮುಖ್ಯಾಧಿಕಾರಿ 2018ರಲ್ಲಿ ತಮ್ಮ ಪತಿ ಸುರೇಶ ಕಶೆಟ್ಟಿ ಹೆಸರಲ್ಲಿ ಡ್ರಾ ಮಾಡಿರುವ 2.75 ಲಕ್ಷ, ಪುರಸಭೆ ವಕೀಲರಾದ ಎಂ.ಆರ್.ಪಾಟೀಲರಿಗೆ ಸಂದಾಯ ಮಾಡಿರುವ 5.56 ಲಕ್ಷ ಹಣ ಮರಳಿ ಪುರಸಭೆಗೆ ಭರಣಾ ಆಗಬೇಕು. ಅಲ್ಲಿವರೆಗೂ ನಾವು ಎದ್ದೇಳೊಲ್ಲ ಎಂದು ಸ್ಪಷ್ಟಪಡಿಸಿದರು.
ಜೈನ ಸಮಾಜಕ್ಕೆ 2018ರಲ್ಲಿ ಹಿಂದಿನ ಶಾಸಕರು (ಸಿ.ಎಸ್.ನಾಡಗೌಡ) ಪತ್ರ ಕೊಟ್ಟು ನಿವೇಶನ ಕೊಡುವಂತೆ ತಿಳಿಸಿದ್ದರು. ಆದರೆ ಅವರು ಕಾನೂನು ಪ್ರಕಾರ ಕೊಡುವಂತೆ ಹೇಳಿದ್ದಾರೆ ಹೊರತು ಕಾನೂನು ಉಲ್ಲಂಘಿಸಿ ಕೊಡುವಂತೆ ಹೇಳಿಲ್ಲ. ಲೀಜ್ ರೂಪದಲ್ಲಿ ಕೊಟ್ಟದ್ದು ಕಾನೂನು ಬಾಹಿರ. ಸರ್ಕಾರಕ್ಕೆ ನಷ್ಟ ಮಾಡಿ ಆ ಜಾಗವನ್ನು ಅವರಿಗೆ ಕೊಟ್ಟಿದ್ದಾರೆ. ಅದು ತಪ್ಪು ಎಂದು ಪ್ರತಿಪಾದಿಸಿದರು.
ನಮ್ಮ ಹೆಸರಲ್ಲಿ ಯಾವುದೇ ಅಂಗಡಿ ಇದ್ದರೆ ದಾಖಲೆ ಹಾಜರುಪಡಿಸಲಿ. ನಾವು ಭ್ರಷ್ಟಾಚಾರ ಮಾಡಿದ್ದಕ್ಕೆ ಸಾಕ್ಷಿ ಇದ್ದರೆ ತಗೊಂಡು ನಮ್ಮ ಜೊತೆ ಹೋರಾಟಕ್ಕೆ ಕುಳಿತುಕೊಳ್ಳಲಿ. ಸಾರ್ವಜನಿಕ ಆಸ್ತಿ ದುರ್ಬಳಕೆ ಆಗುವುದನ್ನು ತಡೆಯಲೆಂದೇ ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಎಂದರು. ಸದಸ್ಯರಾದ ರಫೀಕ್ ದ್ರಾಕ್ಷಿ, ಪ್ರೀತಿ ದೇಗಿನಾಳ, ಮಾಜಿ ಸದಸ್ಯ ಸಂತೋಷ, ಯಾಸೀನ್ ಅತ್ತಾರ, ರುದ್ರಗೌಡ ಅಂಗಡಗೇರಿ, ಪುರಸಭೆ ಮಳಿಗೆಯ ಅಂಗಡಿಕಾರರು ಇದ್ದರು.