Advertisement

ಚಿಂತನ-ಮಂಥನ ; ಇಂದಿನಿಂದ 2 ದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ

02:45 AM Dec 28, 2021 | Team Udayavani |

ಬೆಂಗಳೂರು : ವಿಧಾನಪರಿಷತ್‌ ಚುನಾವಣೆಯ ಫ‌ಲಿತಾಂಶ, ನಾಯಕತ್ವ ಬದಲಾವಣೆ ವದಂತಿಯಂಥ ಬಿಸಿ ವಿಚಾರಗಳು ಮುನ್ನೆಲೆಯಲ್ಲಿ ಇರುವಾಗಲೇ, ಹುಬ್ಬಳ್ಳಿಯಲ್ಲಿ ಮಂಗಳವಾರದಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮತ್ತು ಕೋರ್‌ ಕಮಿಟಿ ಸಭೆ ಆರಂಭವಾಗಲಿದೆ.

Advertisement

ಪರಿಷತ್‌ ಚುನಾವಣೆ ವಿಚಾರದಲ್ಲಿ ಬೆಳಗಾವಿಯಲ್ಲಿ ಅಧಿಕೃತ ಅಭ್ಯರ್ಥಿ ಸೋಲು, ಧಾರವಾಡ, ಬಾಗಲಕೋಟೆಯ ಹಿನ್ನಡೆ, ಮಂಡ್ಯದ ಕಳಪೆ ಸಾಧನೆ ಬಗ್ಗೆ ಆತ್ಮಾವಲೋಕನ ನಡೆಯಲಿದೆ. 25 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲ್ಲುವ ಅವಕಾಶ ಇದ್ದರೂ ಆಂತರಿಕ ಹೊಡೆತ ಹಾಗೂ ಇತರ ಕಾರಣಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿರುವುದು ಕಾರ್ಯಕಾರಿಣಿ ಹಾಗೂ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಲಖನ್‌ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋತಿದ್ದು, ಅದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳದಿರುವುದು ಬೇರೆ ರೀತಿಯ ಸಂದೇಶ ರವಾನೆಯಾಗಿದೆ. ಪಕ್ಷದ ಸಾಧನೆ ಮತ್ತು ವೈಫ‌ಲ್ಯದ ಕುರಿತು ಕಾರ್ಯಕಾರಿಣಿ ಹಾಗೂ ಕೋರ್‌ ಕಮಿಟಿಯಲ್ಲಿ ಪ್ರಸ್ತಾಪವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆಡಳಿತ ಪಕ್ಷವಾಗಿ ಬಿಜೆಪಿ ಕನಿಷ್ಠ 12ರಿಂದ 15 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದರೂ ಕೇವಲ 11 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಕಾಂಗ್ರೆಸ್‌ ಕೂಡ ಅಷ್ಟೇ ಸ್ಥಾನಗಳನ್ನು ಜಯಿಸಿದೆ. ಹೀಗಾಗಿ ಬಿಜೆಪಿ ಈ ಚುನಾವಣೆಯ ಫ‌ಲಿತಾಂಶದ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ತಾ.ಪಂ., ಜಿ.ಪಂ. ಚುನಾವಣೆ ಬಗ್ಗೆ ಚರ್ಚೆ ಸಂಭವ
ಮುಂದಿನ ವರ್ಷದ ತಾ.ಪಂ., ಜಿ.ಪಂ. ಚುನಾವಣೆಗಳು ಬಿಜೆಪಿಗೆ ಮಹತ್ವದ್ದಾಗಿದೆ. ಜತೆಗೆ 2023ರ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗುತ್ತವೆ. ಆದ್ದರಿಂದ ಈಗಿನಿಂದಲೇ ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣ ಸಿದ್ಧತೆ ಕುರಿತೂ ಸಭೆಯಲ್ಲಿ ಶಾಸಕರಿಗೆ ನಾಯಕರು ಸೂಚನೆ ನೀಡುವ ಸಾಧ್ಯತೆ ಇದೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಅಥವಾ ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಈ ಬಗ್ಗೆ ವರಿಷ್ಠರ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಲಿ ಇರುವ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡುವ ಕುರಿತಂತೆ ಸಭೆಯಲ್ಲಿ ಚರ್ಚೆಗೆ ಬರಲಿದೆ.

Advertisement

ಪಾದಯಾತ್ರೆ ತಡೆಯಲು ಕಾರ್ಯತಂತ್ರ
ಬಿಜೆಪಿ ಆಡಳಿತ ಪಕ್ಷವಾಗಿ ವಿಪಕ್ಷ ಕಾಂಗ್ರೆಸ್‌ನ ಕಾರ್ಯತಂತ್ರಗಳಿಗೂ ಪ್ರತ್ಯುತ್ತರ ನೀಡುವ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ವಿಪಕ್ಷ ಕಾಂಗ್ರೆಸ್‌ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಮುಂದಾಗಿರುವುದು, ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ಅದನ್ನು ತಡೆಯಲು ಕಾರ್ಯತಂತ್ರ ರೂಪಿಸುವ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವರಿಷ್ಠರ ಗಮನದಲ್ಲಿದೆ: ಸಿಎಂ
ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಸಹಿತ ಹಲವು ಬೆಳವಣಿಗೆಗಳು ವರಿಷ್ಠರ ಗಮನಕ್ಕೆ ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರದ ಆಡಳಿತ ಮತ್ತು ಪಕ್ಷದ ನಡುವೆ ಸಮನ್ವಯ ಇದೆ. ಮುಂದಿನ ದಿನಗಳಲ್ಲಿ ಸರಕಾರ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023ಕ್ಕೆ ಬಿಜೆಪಿ ಉತ್ತಮ ಕೆಲಸಗಳು ಹಾಗೂ ಸಾಧನೆಗಳನ್ನು ಜನರ ಮುಂದೆ ಇಡಲಿದೆ. ಎರಡು ತಿಂಗಳಿಗೊಮ್ಮೆ ಈ ಸಭೆಯನ್ನು ಕೈಗೊಂಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next