ಪಟ್ನಾ: ಬಿಹಾರದಲ್ಲಿ ಎಲ್‌ಜೆಪಿ ಜತೆ ಯಾವುದೇ ಸಖ್ಯ ಇಲ್ಲ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸಿದ್ದರೂ, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮಾತ್ರ ತಮ್ಮ ರಾಜಕೀಯ ತಂತ್ರವನ್ನು ಮುಂದುವರಿಸಿದ್ದಾರೆ.
ತಮ್ಮ ವಿರುದ್ಧ ಬಿಜೆಪಿ ಟೀಕಿಸಿರುವುದಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಚಿರಾಗ್, “ಸಿಎಂ ನಿತೀಶ್ ಕುಮಾರ್ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣ ಬಿಜೆಪಿ ಕೇವಲ ತನ್ನ ಮೈತ್ರಿಧರ್ಮ ಪಾಲಿಸುತ್ತಿದೆ. ಪ್ರಧಾನಿ ಮೋದಿ ಜತೆಗಿನ ನನ್ನ ಸಂಬಂಧವನ್ನು ಎಲ್ಲರೆದುರು ಪ್ರದರ್ಶಿಸ ಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.
ಇದೇ ವೇಳೆ, ಬಂಕೀಪುರ ಕ್ಷೇತ್ರದಲ್ಲಿ 3 ಬಾರಿ ಗೆದ್ದಿರುವ ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್‌ನಿಂದ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಕಣಕ್ಕಿಳಿಯ ಲಿದ್ದಾರೆ. ಈ ಕ್ಷೇತ್ರ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕಳೆದ ಬಾರಿ ಪಟ್ನಾ ಸಾಹಿಬ್‌ನಲ್ಲಿ ಶತ್ರುಘ್ನ ಅವರು ಸೋಲುಂಡಿದ್ದರು. “ನಾನು ನನ್ನ ಅಪ್ಪನ ಸೋಲಿಗೆ ಪ್ರತೀಕಾರ ತೀರಿಸಲೆಂದು ಸ್ಪರ್ಧಿಸುತ್ತಿಲ್ಲ. ಬದಲಿಗೆ ಪಾಟ್ನಾದ ಜನರ ಶ್ರೇಯೋಭಿವೃದ್ಧಿಗಾಗಿ ಕಣಕ್ಕಿಳಿದಿದ್ದೇನೆ’ ಎಂದು ಲವ ಸಿನ್ಹಾ ಹೇಳಿದ್ದಾರೆ.
ಬೈಡೆನ್ ಹೇಳಿಕೆ ಪ್ರಸ್ತಾವ: ಅಮೆರಿಕದಲ್ಲಿ ಡೆಮಾ ಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ನೀಡಿರುವ “ಭಯದ ಬದಲಿಗೆ ಭರವಸೆ, ವಿಭಜನೆ ಬದಲಿಗೆ ಏಕತೆ’ ಹೇಳಿಕೆಯನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ಚಿದಂಬರಂ, ಬಿಹಾರ, ಮಧ್ಯಪ್ರದೇಶದ ಮತದಾರರು ಕೂಡ ಇಂಥದ್ದೇ ಶಪಥ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.
ಎಲ್‌ಜೆಪಿ ಬಿಜೆಪಿಯ “ಬಿ’ ಟೀಂ ಆಗಿದ್ದು, ಮತಗಳನ್ನು ವಿಭಜಿಸುವುದು ಅವರ ಯೋಜನೆ ಆಗಿದೆ.
ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ