ಬೆಂಗಳೂರು: ಮುಖ್ಯಮಂತ್ರಿಯಾಗಬೇಕಾದರೆ 2500 ಕೋಟಿ ರೂ. ಕೊಡಿ, ಸಚಿವನಾಗಬೇಕಾದರೆ 100 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದವರು ಹೇಳಿದ್ದರು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿದೆ. ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು, ‘ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದೇ ಬಿಜೆಪಿ ಸಾಧನೆ’ ಎಂದು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸಿಎಂ ಹುದ್ದೆಗೆ- 2500 ಕೋಟಿ ರೂ., ಪಿಎಸ್ ಐ ಹುದ್ದೆಗೆ- 80 ಲಕ್ಷ ರೂ., ಮಂತ್ರಿಗಿರಿಗೆ- 50-70 ಕೋಟಿ ರೂ., ಕಾಮಗಾರಿಗಳಿಗೆ -40% ಕಮಿಷನ್, ಮಠಗಳಿಗೆ -30% ಕಮೀಷನ್, ವರ್ಗಾವಣೆಗೆ- ಫಿಕ್ಸೆಡ್ ರೇಟ್. ಹೀಗೆ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದೇ ಬಿಜೆಪಿ ಸಾಧನೆ ಎಂದು ದಾಳಿ ನಡೆಸಿದ್ದಾರೆ.
ಆಫರ್ ಬಂದಿತ್ತು: 2500 ಕೋಟಿ ರೂ. ರೆಡಿ ಮಾಡಿಟ್ಟುಕೊಳ್ಳಿ, ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ನನಗೂ ಆಫರ್ ಬಂದಿತ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಂಬ್ ಸ್ಫೋಟ ಮಾಡಿದರು.
ಇದನ್ನೂ ಓದಿ:ಇನ್ನು ಮೂರೇ ದಿನಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ: ಯಡಿಯೂರಪ್ಪ ಸುಳಿವು
ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದ ಕೆಲವರು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿ 2500 ಕೋಟಿ ರೂ. ತಯಾರಿ ಮಾಡಿಟ್ಟುಕೊಳ್ಳುವಂತೆ ಹೇಳಿದ್ದರು. 2500 ಕೋಟಿ ಎಂದರೆ ಏನು, ಅದೇನು ಸಾಮಾನ್ಯನಾ, ಅಷ್ಟೊಂದು ಹಣವನ್ನು ಯಾವ ಕೊಠಡಿಯಲ್ಲಿ ಇಡುವುದು, ಯಾವ ಗೋದಾಮಿನಲ್ಲಿ ಇಡುವುದು ಅಂತ ಕೇಳಿದೆ. ರಾಜಕಾರಣದಲ್ಲಿ ಅಲ್ಲಿ, ಇಲ್ಲಿ ಹೋಗಿ ಯಾರೂ ಮೋಸ ಹೋಗಬಾರದು. ಟಿಕೆಟ್ ಕೊಡುತ್ತೇವೆ, ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂಬ ಆಫರ್ ಬರುತ್ತವೆ. ಸೋನಿಯಾ ಗಾಂಧಿ, ಜೆ.ಪಿ.ನಡ್ಡಾ, ಅಮಿತ್ ಶಾ ಅವರನ್ನು ಭೇಟಿ ಮಾಡಿಸುವುದಾಗಿ ಮೋಸ ಮಾಡುವ ಕಂಪನಿಗಳು ಇವೆ. ಇಂಥವು ಗಳನ್ನು ಯಾರೂ ನಂಬಬಾರದು. ನಾನು ವಾಜಪೇಯಿ ಕೈಯಲ್ಲಿ ಕೆಲಸ ಮಾಡಿದ್ದೇನೆ. ಆಡ್ವಾಣಿ, ರಾಜನಾಥ ಸಿಂಗ್, ಅರುಣ ಜೇಟ್ಲಿ ಅವರು ಬಸನಗೌಡ ಅಂತ ಕರೆಯುತ್ತಿದ್ದರು. ಇಂಥ ವ್ಯಕ್ತಿಗೆ (ಬಸನಗೌಡ) 2500 ಕೋಟಿ ರೂ. ಸಜ್ಜುಗೊಳಿಸಿ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು.