Advertisement

BJP: ಮೋದಿ ಮಾತು ಕೇಳಿ ತಪ್ಪು ಮಾಡಿದೆ!: ವಿ. ಸೋಮಣ್ಣ

11:07 PM Nov 25, 2023 | Team Udayavani |

ತುಮಕೂರು: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ. ಸೋಮಣ್ಣ ಅವರು ಈಗ ತಮ್ಮ ಆಕ್ರೋಶವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವ್ಯಕ್ತಪಡಿಸಿದ್ದಾರೆ.

Advertisement

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಗಳನ್ನು ಶನಿವಾರ ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ತಮ್ಮ ಬೇಸರ, ನೋವು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಅಮಿತ್‌ ಶಾ ಬಂದು ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ತಾಸು ಮನೆಯಲ್ಲಿ ಕುಳಿತುಕೊಂಡಿದ್ದರು. ಏನೂ ಮಾಡಲಾಗಲಿಲ್ಲ. ಪ್ರಧಾನಿ ಮೋದಿಯವರು ಹೊಸದಿಲ್ಲಿಗೆ ಕರೆಸಿಕೊಂಡು ನಾಲ್ಕು ದಿನ ಇರಿಸಿಕೊಂಡು ನೀನು ಚುನಾವಣೆಗೆ ನಿಂತುಕೊ ಅಂದರು. ಹೀಗಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಬೇಸರದ ಮಾತುಗಳನ್ನಾಡಿದ್ದಾರೆ.

ಎರಡು ಕಡೆ ಸ್ಪರ್ಧೆ ಮಾಡಿದ್ದಕ್ಕೆ ನನಗೆ ಬೇಸರವಾಗಿದೆ. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಮಹಾ ಅಪರಾಧವಾಗಿದೆ ಎಂದು ಸ್ವಾಮೀಜಿ ಬಳಿ ನೋವು ವ್ಯಕ್ತಪಡಿಸಿದರು. ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ದಿಲ್ಲಿಗೆ ದೂರು

Advertisement

ಈ ನಡುವೆ ರಾಜ್ಯ ಬಿಜೆಪಿಯ ಬೆಳವಣಿಗೆಯಿಂದ ಬೇಸತ್ತಿರುವ ಸೋಮಣ್ಣ ಡಿ. 6ರ ಬಳಿಕ ಹೊಸದಿಲ್ಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಡಿ. 7, 8 ಮತ್ತು 9ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ ಅವರೊಂದಿಗೆ ತೆರಳುವುದಾಗಿ ಹೇಳಿದರು.

ನಮ್ಮ ಪಕ್ಷದಲ್ಲಿ ಯಾರು ಅಸಮಾಧಾನಿಗಳಿಲ್ಲ. ನಮ್ಮದೇ ಆದ ಶಕ್ತಿ, ದೂರದೃಷ್ಟಿಯ ಚಿಂತನೆ ಇದೆ. ಹೀಗಾಗಿ ವರಿಷ್ಠರ ಬಳಿ ನಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೇಳಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.

ಕರೆ ಮಾಡಿದರೂ ಸೋಮಣ್ಣ ಸ್ವೀಕರಿಸಿಲ್ಲ: ಬಿಎಸ್‌ವೈ

ಬೆಂಗಳೂರು: ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮುಂದಿನ ದಿನಗಳಲ್ಲಿ ಅವರ ಜತೆ ಮಾತನಾಡುತ್ತೇನೆ. ಅವರು ಪಕ್ಷ ಬಿಡುವ ಚಿಂತನೆಯಲ್ಲಿ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಶನಿವಾರ ಮಾತನಾಡಿದ ಅವರು, ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜತೆ ಸೋಮಣ್ಣ ಮಾತನಾಡಿರುವುದನ್ನು ಗಮನಿಸಿದ್ದೇನೆ. ಬರುವ ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ. ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲಾಗುವುದು. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಬಿಜೆಪಿ ಬಿಡುವ ಚಿಂತನೆಯಲ್ಲಿ ಅವರಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ನಮ್ಮ ಮನೆಗೆ ವಿಜಯೇಂದ್ರ ಬರುವುದು ಬೇಕಿಲ್ಲ ಎಂದಿರುವ ಯತ್ನಾಳ್‌ ಮನೆಗೆ ಹೋಗುತ್ತೇನೆ ಎಂದವರು ಯಾರು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next