ಕಲಬುರಗಿ: ರಾಜ್ಯದಲ್ಲಿ ಬಡವರ ಅಕ್ಕಿ ಕಿತ್ತಕೊಂಡ ಪರಿಣಾಮ ಬಿಜೆಪಿ ಸರಕಾರ ಜನರ ಶಾಪ ತಟ್ಟಿ ಅಧಿಕಾರ ಕಳೆದುಕೊಂಡಿದೆ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 4.22 ಕೋಟಿ ಜನರಿಗೆ ಶೇ 70 ರಷ್ಟು ಜನರಿಗೆ ಅಕ್ಕಿ ಹಣ ಹಾಕಲಾಗುತ್ತಿದೆ. ಬಡವರಿಗೆ ಅಕ್ಕಿ ಕೊಡುವಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಆದರೆ ನಾವು ಪ್ರಜಾದನಿಯಲ್ಲಿ ಮಾತು ಕೊಟ್ಟಂತೆ ಗ್ಯಾರಂಟಿ ನೀಡಲು ಮುಂದಾಗಿದೆ ನಮ್ಮ ಸರಕಾರ. ಇದು ಬಿಜೆಪಿಯವರಿಗೆ ಹಿಡಿಸುತ್ತಿಲ್ಲ. ಜನರಿಗಿಂತ ಬಿಜೆಪಿಯವರಿಗೆ ದೊಡ್ಡ ಚಿಂತೆಯಾಗಿದೆ ಎಂದರು.
ಶಕ್ತಿ ಯೋಜನೆ ಗ್ಯಾರಂಟಿ ಕೂಡ ಈಡೇರಿಸಿದ್ದೇವೆ. ಪ್ರತಿ ನಿತ್ಯ 55 ಲಕ್ಷ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಮೊದಲು 16 ಲಕ್ಷ ಮಹಿಳೆಯರು ಓಡಾಡುತ್ತಿದ್ದರು. ಈಗ ಹೆಚ್ಚಾಗಿದ್ದು ದೇವಸ್ಥಾನಗಳಲ್ಲೂ ಜನ ಬರುತ್ತಿರುವುದರಿಂದ ಖುಷಿಯಾಗಿದೆ ಎಂದು ಧರ್ಮಸ್ಥಳದ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಈಗ ಇನ್ನೊಂದು ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ತರುತ್ತಿದ್ದೇವೆ. 1.41 ಕೋಟಿ ಜನರಿಗೆ ಲಾಭ ದೊರೆಯಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 54.99 ಲಕ್ಷ, ಚಾಮುಂಡೇಶ್ವರಲ್ಲಿ 20.48 ಲಕ್ಷ, ಹೆಸ್ಕಾಂ 30.66 ಲಕ್ಷ, ಮೆಸ್ಕಾಂ 43.61 ಲಕ್ಷ ಹಾಗೂ ಜೆಸ್ಕಾಂನಲ್ಲಿ 20.21 ಲಕ್ಷ ಮನೆ ಉಪಯೋಗಿಗಳಿಗೆ ಸಿಗಲಿದೆ ಎಂದರು.
ಬಿಜೆಪಿಯಲ್ಲಿ ತಂಡವೇ ಇಲ್ಲ: ರಾಜ್ಯದಲ್ಲಿ ಬಿಜೆಪಿ ತನ್ನ ನಾಯಕನ ಆಯ್ಕೆ ಮಾಡಲಿಕ್ಕಾಗದೆ ಒದ್ದಾಡುತ್ತಿದೆ. ಅದೂ ಅಲ್ಲದೆ ಆಟ ಆಡುವವರನ್ನು ಬಿಟ್ಟು 12 ನೇ ಆಟಗಾರರನ್ನು ಹುಡುಕಿ ನಾಯಕ ಮಾಡಲು ಹೊರಟಿದ್ದಾರೆ. ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಸಾಂಗತ್ಯ ಪ್ರಸ್ತಾಪ ಮಾಡಿದರು.
ಅಲ್ಲದೆ ಜೆಡಿಎಸ್ ಮುಗಿದು ಹೋಗಿದೆ. ಸುಖಾ ಸುಮ್ಮನೆ ಪೆನ್ ಡ್ರೈವ್ ಇದೆ ಎನ್ನುತ್ತಾ ಓಡಾಡುವುದು ಬಿಡಿ ಎಂದರು.
ಕೆಕೆಆರ್ಡಿಬಿ ಅಧ್ಯಕ್ಷ ಸದ್ಯಕ್ಕೆ ಚರ್ಚೆಯಿಲ್ಲ: ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಚರ್ಚೆಗೆ ಬಂದಿಲ್ಲ. ಸಚಿವರು, ಶಾಸಕರು ಯಾರಾಗುತ್ತಾರೋ ಅಧ್ಯಕ್ಷರು ಎನ್ನುವುದು ಸಿಎಂ ಅವರಿಗೆ ಬಿಟ್ಟ ವಿಚಾರ ಎಂದರು.
ಶಾಸಕ ಅಲ್ಲಂಪ್ರಭು ಪಾಟೀಲ ಹಾಗೂ ಇತರರು ಇದ್ದರು.