Advertisement

ನಮ್ಮ ಸರ್ಕಾರದಲ್ಲಿ ಗೃಹಮಂತ್ರಿ, ಮುಖ್ಯಮಂತ್ರಿ ಮೆದುವಾಗಿದ್ದರಿಂದ ಬಿಜೆಪಿ ಸೋಲಾಯಿತು

08:27 AM Mar 05, 2024 | Team Udayavani |

ವಿಜಯಪುರ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ಬಂಧಿಸಿದ್ದಾರೆ. ಇದಕ್ಕಾಗಿ ಕರ್ನಾಟಕ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಇದ್ದಾಗ ನಮ್ಮ ಗೃಹಮಂತ್ರಿಗಳು ಏನಾದರೂ ನಡೆದರೆ ಕಠಿಣ ಕ್ರಮ ತಗೆದುಕೊಳ್ಳುತ್ತೇನೆ ಎನ್ನುತ್ತಿದ್ದರು. ಮುಖ್ಯಮಂತ್ರಿ ಸಹ ಮೆದುವಾಗಿಯೇ ಇದ್ದರು. ಈ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಯಿತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸೋಮವಾರ ನಗರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೇನಾದ್ರೂ ಗೃಹ ಮಂತ್ರಿ ಅಗಿದ್ದರೆ ಎನ್ಕೌಂಟರ್ ಮಾಡಿ ಬಿಡುತ್ತಿದ್ದೆ. ಎಲ್ಲರೂ ಜೈ ಶ್ರೀರಾಮ, ಜೈ ಶಿವಾಜಿ ಎಂದು ಕೂಗಲು ಹಚ್ಚುತ್ತಿದ್ದೆ ಎಂದರು.

ಈಗಲಾದರೂ ಪಾಕ್ ಪರ ಘೋಷಣೆ ಕೂಗಿದವರನ್ನು ರಾಜ್ಯದ ಪೊಲೀಸರು ಬಂಧಿಸಿ, ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆಗೆ ಕಾರಣವಾದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರು ಮೃಧು ಧೋರಣೆ ತೋರಿದರು ಎಂದು ಸರ್ಕಾರ ನಡೆಸಿದ ಸ್ವಪಕ್ಷೀಯರ ವಿರುದ್ದವೂ ಬೇಸರ ವ್ಯಕ್ತಪಡಿಸಿದರು.

2024 ಕ್ಕೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಶಿವಾಜಿ ಮಹಾರಾಜರ ಎರಡನೇ ಅವತಾರವಾದ ಮೋದಿ‌ಗೆ ಮತ್ತೆ ಪ್ರಧಾನಿ ಅವಕಾಶ ಸಿಗಲಿದೆ. ಇನ್ನು ಹಮ್ ಪಾಂಚ್ ಹಮಾರಾ ಪಚ್ವೀಸ್ ನಡೆಯಲ್ಲ. ಬರುವ ಲೋಕಸಭಾ ಚುನಾವಣೆ ಬಳಿಕ ಇದೆಲ್ಲ ನಡೆಯಲ್ಲ ಎಂದರು.

ಕರ್ನಾಟಕ ರಾಜ್ಯದಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಮಾದರಿಯಲ್ಲಿ‌‌ ಆಡಳಿತ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಮಹಾರಾಜರ ಎರಡನೇ ಅವತಾರವಾದ ಕಾರಣದಿಂದಲೇ 500 ವರ್ಷಗಳ ಹೋರಾಟದ ಫಲವಾಗಿ ರಾಮ ಮಂದಿರ ನಿರ್ಮಾಣಗೊಂಡು, ಲೋಕಾರ್ಪಣೆ ಆಗಿದೆ ಎಂದು ಹೇಳಿದರು.

Advertisement

ಕಾಶಿ ವಿಶ್ವನಾಥ, ಮಥುರಾ ಕೃಷ್ಟ ದೇವಾಲಯವನ್ನೂ ನಾವು ಪಡೆಯುತ್ತೇವೆ. ಮೋದಿ ಬಳಿಕ ಯೋಗಿ ಬಂದ ಮೇಲೆ ಕರ್ನಾಟಕದಲ್ಲಿ ನಾನು ಬಂದ ನಂತರ ಖತಂ ಎಲ್ಲಾ‌ ಖತಂ ಎಂದು ಭವಿಷ್ಯ ನುಡಿದರು.

ನಾಳೆ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಬೆಳಗಾವಿಗೆ ಹೋಗುತ್ತಿದ್ದೇನೆ. ನನಗೆ ಬಾಗಲಕೋಟೆ, ಬೆಳಗಾವಿ, ಕೊಪ್ಫಳದಿಂದ ಸ್ಪರ್ದೆ ಮಾಡಲು ಒತ್ತಡವಿದೆ. ಆದರೂ ನಾನು ಎಲ್ಲೂ ಹೋಗಲ್ಲ, ವಿಜಯಪುರ ನನಗೆ ಎಲ್ಲಾ ನೀಡಿದೆ. ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗಾ ನಾನು ಏನಾದರೂ ಆಗೇ ಆಗುತ್ತೇನೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next