ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿಸಲು ಆಪರೇಷನ್ ಕಮಲಕ್ಕೆ ಮುಂದಾಗಿರುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಬಿಜೆಪಿ ನಾಯಕರು ತಮ್ಮ ಚಿಹ್ನೆಯಾದ ಕಮಲದ ಹೂವಿಗಿದ್ದ ಗೌರವವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಸರಿನಲ್ಲಿ ಅರಳಿದರೂ ಕಮಲದ ಹೂವನ್ನು ಎಲ್ಲರೂ ಪವಿತ್ರ ಎಂದು ಪರಿಗಣಿಸುತ್ತಿದ್ದಾರೆ. ಅದಕ್ಕೆ ಅಷ್ಟೊಂದು ಗೌರವ ಇದೆ. ಆದರೆ, ಶಾಸಕರನ್ನೇ ಖರೀದಿಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿರುವ ಬಿಜೆಪಿ ನಾಯಕರ ಕೈಗೆ ಸಿಕ್ಕಿರುವ ಕಮಲದಲ್ಲಿ “ಕ’ ಎಂಬ ಅಕ್ಷರವೇ ದೂರವಾಗಿ ಉಳಿದೆರಡು ಅಕ್ಷರ ಮಾತ್ರ ಉಳಿದುಕೊಂಡಿದೆ ಎಂದು ಕಿಡಿ ಕಾರಿದರು.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಬಳಿಕ ಅಧಿಕಾರ ಸಿಗದೆ ಮನಿರಸನಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳುವ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಯಾವತ್ತೂ ಜನಪರ ಧ್ವನಿ ಎತ್ತಿಲ್ಲ. ಜನರ ಒಳಿತಿಗಿಂತ ಅಧಿಕಾರಕ್ಕಾಗಿಯೇ ರಾಜಕಾರಣ ಎನ್ನುವಂತೆ ವರ್ತಿಸುತ್ತಿದ್ದಾರೆ. ಜನರನ್ನು ದಿಕ್ಕುತಪ್ಪಿಸುವ ವಿಚಾರಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುತ್ತಿದ್ದಾರೆ ಎಂದು ಆಪಾದಿಸಿದರು. ಜೆಡಿಎಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ಮೈತ್ರಿ ಸರ್ಕಾರದ ಯಾವೊಬ್ಬ ಶಾಸಕರೂ ಬಿಜೆಪಿಯ ಆಪರೇಷನ್ ಕಮಲದ ಆಮಿಷಕ್ಕೆ ಬಲಿಯಾಗುವುದಿಲ್ಲ. ಮುಖ್ಯಮಂತ್ರಿ ಎಚ್‌ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ನಡೆಸಲಿದೆ. ಆದ್ದರಿಂದ ಬಿಜೆಪಿಯವರು ಅನೈತಿಕ ರಾಜಕಾರಣ ಬಿಟ್ಟು ಪ್ರತಿಪಕ್ಷವಾಗಿ ರಚನಾತ್ಮಕ ಕೆಲಸ ಮಾಡಲಿ ಎಂದು ಸಲಹೆ ಮಾಡಿದರು.
ರೈತರ ಸಾಲ ಮನ್ನಾ, ಡೀಸೆಲ್ ಮತ್ತು ಪೆಟ್ರೋಲ್ ದರ ಇಳಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಾಂತೀಯ ಪಕ್ಷಗಳ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಷ್ಟ್ರೀಯ ಪಕ್ಷಗಳಾದರೆ ಪ್ರತಿಯೊಂದು ನಿರ್ಧಾರಕ್ಕೂ ಹೈಕಮಾಂಡ್‌ನತ್ತ ಮುಖ ಮಾಡುತ್ತವೆ. ಆದರೆ, ಪ್ರಾದೇಶಿಕ ಪಕ್ಷಗಳು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡದೆ ಜನರ ಅಗತ್ಯತೆ ಆಧರಿಸಿ ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳುತ್ತವೆ.
● ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ