ಬೆಂಗಳೂರು: ಲೋಕಸಭಾ ಚುನಾವಣೆ- 2019ಕ್ಕೆ ರಾಜ್ಯ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗದೇ ಇದ್ದರೂ, ಮೇಲ್ನೋಟಕ್ಕೆ ಕ್ಷೇತ್ರವಾರು ಅಭ್ಯರ್ಥಿಗಳ ಗುರುತಿಸುವಿಕೆ ಶುರುವಾಗಿದೆ. ಅದರಲ್ಲೂ ಯುವಕರಿಗೆ ಹೆಚ್ಚಿನ ಪ್ರಾಧಾನ್ಯತೆ ವಹಿಸಲು ನಿರ್ಧರಿಸಲಾಗಿದೆ.
ಪಕ್ಷ ಸಂಘಟನೆಯ ಚಾತುರ್ಯ, ಸ್ಥಳೀಯ ವರ್ಚಸ್ಸು ಹಾಗೂ ಯುವ ಮಾನದಂಡದಡಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಕ್ಷೇತ್ರ ಮೂಲದವರಲ್ಲದವರಿಗೆ ಟಿಕೆಟ್ ನೀಡಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನೇ ಆದ್ಯತೆಯ ಮೇರೆಗೆ ಆಯ್ಕೆ ಮಾಡಲು ಕಸರತ್ತು ನಡೆಯುತ್ತಿದೆ.
ಈ ರೀತಿಯ ಮಾನದಂಡಗಳನ್ನು ಪರಿಗಣಿಸಲು ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಸೂಚನೆ ನೀಡಿದ್ದು, ಈ ಬಗ್ಗೆ ಬಗ್ಗೆ ತೀವ್ರ ಚಿಂತನೆ ನಡೆಯುತ್ತಿದೆ.ಉಡುಪಿ- ಚಿಕ್ಕಮಗಳೂರು, ಬೆಂಗಳೂರು ಉತ್ತರ, ಕೊಡಗು- ಮೈಸೂರು ಮೊದಲಾದ ಕ್ಷೇತ್ರದಲ್ಲಿ ಸ್ಥಳೀಯರ ಬದಲಿಗೆ ರಾಜ್ಯ ನಾಯಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ, ಸ್ಥಳೀಯ ಕಾರ್ಯಕರ್ತರ ಶ್ರಮದಿಂದ ಸ್ಥಳೀಯರಲ್ಲದವರು ಜಯ ಸಾಧಿಸಿದ್ದರು. ಆದರೆ, ಈ ಬಾರಿ ಅದೇ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಸ್ವ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ಇದೆ. ಹೀಗಾಗಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಾವಣೆ ಸಂರ್ಭದಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ, ಸಂಘಪರಿವಾರ ಸಂಘಟನೆಯಲ್ಲಿ ಸಕ್ರಿಯವಾಗಿರುವ ಅಭ್ಯರ್ಥಿಗಳ ಹುಡುಕಾಟವೂ ತೆರೆಮರೆಯಲ್ಲಿ ಆರಂಭವಾಗಿದೆ.
ನೇರಾನೇರ ಫೈಟ್ ಇರುವ ಕೆಲವು ಕ್ಷೇತ್ರ ಹೊರತುಪಡಿಸಿ ಬೇರೆಲ್ಲ ಕಡೆಗಳಲ್ಲೂ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಪಕ್ಷದಲ್ಲೇ ಎದ್ದಿದೆ. ಕಾರಣ, ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದರೆ, ಜಯಗಳಿಸಿದ ನಂತರ ಕ್ಷೇತ್ರದ ಬಗ್ಗೆ ಹೆಚ್ಚೇನು ಆಸಕ್ತಿ ವಹಿಸುತ್ತಿಲ್ಲ ಮತ್ತು ಮತದಾರರಿಗೆ ಕಾರ್ಯಕರ್ತರು ಉತ್ತರಿಸಬೇಕಾದ ಸಂದಿಗ್ಧ ಪರಿಸ್ಥಿತಿ ಈಗಾಗಲೇ ಎದುರಾಗಿತ್ತು. ಹೀಗಾಗಿ ಸ್ಥಳೀಯವಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಚಿಂತನೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ.
ಇನ್ನು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಮುಖರು ಸಂಘ ಪರಿವಾರದ ಹಿರಿಯ ನಾಯಕರ ಪ್ರಭಾವ ಬಳಸಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಕೇಂದ್ರದಿಂದ ಕೆಲವೊಂದು ಮಾನದಂಡವನ್ನು ರಾಜ್ಯದ ನಾಯಕರಿಗೆ ನೀಡಲಿದ್ದಾರೆ. ಅದರ ಜತೆಗೆ ಕೇಂದ್ರದ ತಂಡವು ಕೂಡ ಕ್ಷೇತ್ರವಾರು ಸಮೀಕ್ಷೆ ಕೂಡ ನಡೆಸಲಿದೆ. ಇದಾದ ನಂತರ ರಾಜ್ಯದ ಮಟ್ಟದ ಪ್ರಮುಖರಿಂದಲೂ ಪಟ್ಟಿ ಪಡೆದುಕೊಳ್ಳುತ್ತಾರೆ. ಎರಡು ಪಟ್ಟಿ ಪರಿಶೀಲಿಸಿ, ಎಲ್ಲರೀತಿಯ ಸಾಮರ್ಥ್ಯ ಅಳೆದು, ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನ ಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷರು ಸಹಿತವಾಗಿ ಸಂಘಟನಾ ಕಾರ್ಯದರ್ಶಿಗಳು ಹಾಗೂ ಬಹುತೇಕ ಎಲ್ಲ ನಾಯಕರು ಚುನಾವಣಾ ಗೆಲುವಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಉಪಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ಗೆಲುವಿನ ತಂತ್ರಗಾರಿಕೆ ಆರಂಭವಾಗಲಿದೆ. ಹೀಗಾಗಿ ಸದ್ಯ ಯಾವುದೇ ಕ್ಷೇತ್ರದಲ್ಲೂ 2019ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅಂತಿಮವಾಗಿಲ್ಲ. ಈಗ ಸಂಸದರಾಗಿರುವವರಲ್ಲಿ ಕೆಲವು ಸೀಟು ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
ಕೆಲವೊಂದು ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬಂತೆ ಕೆಲವರು ಪಕ್ಷದ ಲಾಂಛನದಡಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ವಾಟ್ಸ್‌ಆಪ್ಸ್, ಫೇಸ್‌ಬುಕ್, ಟ್ವಿಟ್ಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿ ಬಳಗ ಸೃಷ್ಟಿಸಿಕೊಂಡು ಯುವಮನ ಸೆಳೆಯುವ ಕಾರ್ಯದಲ್ಲೂ ಮಗ್ನರಾಗಿದ್ದಾರೆ. ಕೆಲವೊಂದು ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ತಂಡದ ಪ್ರಮುಖರ ಆಶಯವಾದರೂ, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನು ಕ್ಷೇತ್ರದ ಪರಿಸ್ಥಿತಿಯೇ ನಿರ್ಧರಿಸಲಿದೆ.
– ರಾಜು ಖಾರ್ವಿ ಕೊಡೇರಿ