ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಂದ ಕುಮಾರ್ ಸಿಂಗ್ ಚೌಹಾಣ್ ಸೋಮವಾರ ರಾತ್ರಿ(ಮಾರ್ಚ್ 01) ಗುರುಗ್ರಾಮ್ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದಕ್ಷಿಣ ಭಾರತ ಹೊರತು ಪಡಿಸಿ ಉಳಿದೆಡೆ ಬಿಸಿಲ ಬೇಗೆ ಇನ್ನಷ್ಟು ಏರಿಕೆ ಸಾಧ್ಯತೆ : ಐ ಎಮ್ ಡಿ
ಆರು ಬಾರಿ ಸಂಸದರಾಗಿದ್ದ ನಂದಕುಮಾರ್ ಸಿಂಗ್ (69ವರ್ಷ) ಕಳೆದ ತಿಂಗಳು ಕೋವಿಡ್ 19 ಸೋಂಕಿಗೆ ಒಳಗಾಗಿದ್ದು, ಅವರು ಗುರುಗ್ರಾಮ್ ನ ಮೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆಂದು ಮೂಲಗಳು ಹೇಳಿವೆ.
ನಂದಕುಮಾರ್ ಸಿಂಗ್ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಂದು ಬಿಜೆಪಿ ವಕ್ತಾರರೊಬ್ಬರು ತಿಳಿಸಿದ್ದಾರೆ. ಸಿಂಗ್ ಅವರ ಅಂತ್ಯಕ್ರಿಯೆ ಅವರ ಪೂರ್ವಜರ ಸ್ಥಳವಾದ ಬುರ್ಹಾನ್ ಪುರ್ ಜಿಲ್ಲೆಯ ಶಹಪುರ್ ನಲ್ಲಿ ನಡೆಯಲಿದೆ ಎಂದು ಪುತ್ರ ಹರ್ಷವರ್ಧನ್ ಚೌಹಾಣ್ ತಿಳಿಸಿದ್ದಾರೆ.
1978ರಲ್ಲಿ ಶಹಪುರ್ ಮುನ್ಸಿಪಲ್ ಕೌನ್ಸಿಲ್ ಮೂಲಕ ನಂದಕುಮಾರ್ ಸಿಂಗ್ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಅವರು ಮಧ್ಯಪ್ರದೇಶ ವಿಧಾನಸಭೆಗೆ ಶಾಸಕರಾಗಿ(1985ರಿಂದ 1996) ಆಯ್ಕೆಯಾಗಿದ್ದರು.
1996ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸಂಸದರಾಗಿ ಸಿಂಗ್ ಆಯ್ಕೆಯಾಗಿದ್ದರು. ನಂತರ 1998, 1999, 2004, 2014 ಮತ್ತು 2019ರಲ್ಲಿ ಸಂಸರಾಗಿ ಪುನರಾಯ್ಕೆಗೊಂಡಿದ್ದರು. ಬಿಜೆಪಿ ಹಿರಿಯ ಮುಖಂಡ ನಂದಕುಮಾರ್ ಅವರ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ.