Advertisement

ಅತೃಪ್ತರ ಸೆಳೆಯಲು “ಐಡ್ಯಾ ಮಾಡ್ಯಾರ

12:30 AM Mar 12, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸವಾಲು ಎದುರಿಸಲು ಬಿಜೆಪಿ ಹೊಸ ಕಾರ್ಯತಂತ್ರ ರೂಪಿಸಿದ್ದು ಎಸ್‌.ಎಂ.ಕೃಷ್ಣ ಅವರಿಗೆ ಹಳೇ ಮೈಸೂರು ಭಾಗದ ಹೊಣೆಗಾರಿಕೆ ವಹಿಸಲು ಮುಂದಾಗಿದೆ.

Advertisement

ಎಸ್‌.ಎಂ.ಕೃಷ್ಣ ಅವರಿಗೆ ಹಳೇ ಮೈಸೂರು ಭಾಗದ ಜವಾಬ್ದಾರಿ ನೀಡಿದರೆ ಬೆಂಗಳೂರು ಉತ್ತರ, ಸೆಂಟ್ರಲ್‌, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ,ತುಮಕೂರು, ಮಂಡ್ಯ,ಹಾಸನ, ಮೈಸೂರು ಕ್ಷೇತ್ರಗಳಲ್ಲೂ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.
 
ಹೀಗಾಗಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿರುವ ಅಸಮಾಧಾನಿತ ಒಕ್ಕಲಿಗ ಮುಖಂಡರನ್ನು ಬಿಜೆಪಿಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ. ಕೇಂದ್ರ ಬಿಜೆಪಿ ನಾಯಕರೂ ಸಹ ಈ ವಿಚಾರವಾಗಿ ಎಸ್‌.ಎಂ.ಕೃಷ್ಣ ಆವರ ಜತೆ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲೇ ಅಶೋಕ್‌ ಅವರು ಸೋಮವಾರ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಮಂಡ್ಯದ ಚೆಲುವರಾಯಸ್ವಾಮಿ, ಮಾಗಡಿಯ ಬಾಲಕೃಷ್ಣ, ಹಾಸನದ ಎ.ಮಂಜು, ತುಮಕೂರಿನ ಕೆ.ಎನ್‌.ರಾಜಣ್ಣ ಅವರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಜತೆಗೆ, ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್‌ ತಪ್ಪಿಸಿಕೊಂಡು ಬೇಸರಗೊಂಡಿರುವ ಜೆಡಿಎಸ್‌ ಸಂಸದ ಎಲ್‌.ಆರ್‌.ಶಿವರಾಮೇಗೌಡರನ್ನೂ ಬಿಜೆಪಿಗೆ ಎಸ್‌.ಎಂ.ಕೃಷ್ಣ ಅವರ ಮೂಲಕ ಕರೆತರುವ ಪ್ರಯತ್ನ ನಡೆದಿದೆ. ಇದಕ್ಕೆ ಸಿ.ಪಿ.ಯೋಗೇಶ್ವರ್‌ ಮಧ್ಯಸ್ಥಿಕೆ ವಹಿಸಿದ್ದಾರೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿಸುವದು, ಎ.ಮಂಜು-ಹಾಸನ ಕ್ಷೇತ್ರದಲ್ಲಿ, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೆ ಸುಮಲತಾ ಅವರಿಗೆ ಬೆಂಬಲ ಸೂಚಿಸಿದರೆ ಆ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಪ್ರಬಲವಾಗಿ ಎದುರಿಸಬಹುದು ಎಂಬ ಕಾರ್ಯತಂತ್ರ ಇದರ ಹಿಂದಿದೆ ಎಂದು ತಿಳಿದು ಬಂದಿದೆ.

ಮಂಡ್ಯದಲ್ಲಿ ಅಂಬರೀಷ್‌ ಅಭಿಮಾನಿಗಳು ಬಿಜೆಪಿ ನಾಯಕರನ್ನು ಸಂಪರ್ಕಿಸಿ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಿದರೂ ನೀವು ಅಭ್ಯರ್ಥಿ ಕಣಕ್ಕಿಳಿಸದೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ, ಬಿಜೆಪಿಯು ಇದೇ ಸಂದರ್ಭ ಬಳಸಿ ಪಕ್ಷದ ವರ್ಚಸ್ಸು ಬೆಳೆಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಸ್ವ ಸಾಮರ್ಥ್ಯ ಇರುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ತೀರ್ಮಾನಿಸಿದೆ.

Advertisement

ತೀರ್ಮಾನವೇ ಬೇರೆ?: ಹಾಸನದಿಂದ ಎಚ್‌.ಡಿ.ದೇವೇಗೌಡರು ಸ್ಪರ್ಧೆ ಮಾಡದೆ ಪ್ರಜ್ವಲ್‌ ರೇವಣ್ಣಗೆ ಬಿಟ್ಟುಕೊಟ್ಟರೆ ನನ್ನ ತೀರ್ಮಾನವೇ ಬೇರೆ ಎಂದು ಈಗಾಗಲೇ ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ. ಜತೆಗೆ ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ನನ್ನ ನಿರ್ಧಾರ ಬೇರೆಯಾಗುತ್ತದೆ ಎಂದೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಚೆಲುವರಾಯಸ್ವಾಮಿ ಸಹಿತ ಅಲ್ಲಿನ ಕಾಂಗ್ರೆಸ್‌ ನಾಯಕರಿಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ “ರಂಗಪ್ರವೇಶ’ ಮಾಡಿದ್ದು ಕಾಂಗ್ರೆಸ್‌-ಜೆಡಿಎಸ್‌ನ ಒಕ್ಕಲಿಗ ನಾಯಕರಿಗೆ ಗಾಳ ಹಾಕಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next