ಹುಬ್ಬಳ್ಳಿ: ಬಿಜೆಪಿ ಕೋರ್ ಕಮೀಟಿ ಸಭೆ ಬುಧವಾರವಷ್ಟೇ ಮುಗಿದಿದ್ದು, ಏ.8ರಂದು ಮತ್ತೂಮ್ಮೆ ಸಭೆ ನಡೆಸಿ ನಂತರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ವಿಷಯದಲ್ಲಿ ನಾವು ಶ್ರದ್ಧೆ-ನಿಷ್ಠೆಯಿಂದ ನೊಂದ ದೀನದಲಿತ, ಹಿಂದುಳಿದ ವರ್ಗದ ಸಮುದಾಯಕ್ಕೆ ಶಾಶ್ವತವಾಗಿ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ನಾವು ಮಾಡಲಾಗದ್ದನ್ನು ಇವರು ಮಾಡಿದರಲ್ಲ ಎಂಬ ಅಪರಾಧ ಮನೋಭಾವ ಕಾಂಗ್ರೆಸ್‌ನವರನ್ನು ಕಾಡುತ್ತಿದೆ. ಮೀಸಲಾತಿ ವಿಚಾರವಾಗಿ ನಾವು ಕೈಗೊಂಡ ನಿರ್ಧಾರಗಳು ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ. ನಾವು ರಾಜಕೀಯ ಇಚ್ಛಾಶಕ್ತಿ ಮೆರೆದರೆ, ಕಾಂಗ್ರೆಸ್‌ನದ್ದು ಡೋಂಗಿತನದ್ದಾಗಿದೆ ಎಂದು ಕುಟುಕಿದರು.
ಕಾಂಗ್ರೆಸ್‌ನ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವುದು ಆ ಪಕ್ಷದ ನಿರ್ಣಯ. ಉಳಿದಿದ್ದೆಲ್ಲ ಕಾನೂನಾತ್ಮಕ ವಿಚಾರವಾಗಿದ್ದು, ಅದು ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ಬಗೆಯ ಪ್ರಕರಣಗಳಲ್ಲಿ ಜನರೇ ತೀರ್ಮಾನಿಸುತ್ತಾರೆ ಎಂದರು.
ಅಪರಾಧ ಹಿನ್ನೆಲೆಯುಳ್ಳವರಿಗೆ ಬಿಜೆಪಿ ಟಿಕೆಟ್ ನೀಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಬಹಳ ಸ್ಪಷ್ಟವಾಗಿದೆ. ಪ್ರಕರಣಗಳು ವಿವಿಧ ಹಂತದಲ್ಲಿರುತ್ತವೆ. ಇದನ್ನೆಲ್ಲ ಗಮನಿಸಿ ಟಿಕೆಟ್ ನೀಡಲಾಗುವುದು. ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಮೂರ್‍ನಾಲ್ಕು ಹಂತದಲ್ಲಿ ಪರಿಶೀಲಿಸಿ ವರದಿ ಪಡೆಯಲಾಗಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು ಎಂದರು.
ಬಿಜೆಪಿ ಪರ ಸೆಲೆಬ್ರಿಟಿಗಳ ಪ್ರಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತೆಲುಗು ನಟ ಪವನ್ ಕಲ್ಯಾಣ್ ಪ್ರಚಾರಕ್ಕೆ ಆಗಮಿಸುವ ವಿಷಯ ನಮಗೆ ಗೊತ್ತಿಲ್ಲ. ಅವರು ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾದು ನೋಡಿ ಎಂದರು.
ಶಿಗ್ಗಾವಿ ಕ್ಷೇತ್ರದಿಂದಲೇ ತಾವು ಸ್ಪರ್ಧಿಸಲಿದ್ದು, ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿಲ್ಲ. ಈ ಕುರಿತ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟಪಡಿಸಿದರು.