ವಿಜಯಪುರ: ಬಿಜೆಪಿ ಸರಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಮರಿಗೆ ನೀಡಿದ್ದ ಶೇ.4 ಮೀಸಲಾತಿ ರದ್ದು ಮಾಡಿತ್ತು. ಬಳಿಕ ಅವರ ಸರಕಾರವೇ ಯಥಾಸ್ಥಿತಿ ಕಾಪಾಡುವುದಾಗಿ ಸುಪ್ರೀಂಕೋರ್ಟ್‌ಗೆ ಅಫಿದವಿತ್ ಸಲ್ಲಿಸಿತ್ತು. ಆದರೂ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೊಸದಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳುವುದೆಲ್ಲ ಸುಳ್ಳು. ಭಾರತೀಯ ಸಂವಿಧಾನ ಸಾಮಾಜಿಕ ನ್ಯಾಯದ ಬಗ್ಗೆ ಹೇಳಿದೆ. ಹಾವನೂರು, ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳು ಮುಸ್ಲಿಮರಿಗೆ ಮೀಸಲಾತಿ ಕೊಡಲು ಶಿಫಾರಸು ಮಾಡಿವೆ.
ಆದರೆ ಬಿಜೆಪಿಯವರು ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಹಿಂದೂಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೇಳಿಕೆ ಮೂಲಕ ಮೋದಿ ಪ್ರಧಾನಿ ಸ್ಥಾನಕ್ಕೆ ಚ್ಯುತಿ ತರುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಮೋದಿ ಪ್ರವೀಣರು, ಭಾರತದ ಪ್ರಧಾನಿಗಳಲ್ಲೇ ಅತಿ ಸುಳ್ಳುಗಾರ ಮೋದಿ. ಸೋಲಿನ ಹತಾಶೆಯಿಂದ ಇಂತಹ ಸುಳ್ಳು ಹೇಳಲಾಗುತ್ತಿದೆ. ಇದರ ಹೊರತಾಗಿ ಮೋದಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. 10 ವರ್ಷಗಳಲ್ಲಿ ಪ್ರಧಾನಿಯಾಗಿ ಬರಿ ಸುಳ್ಳುಗಳನ್ನೇ ಹೇಳಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಯ 25 ಸಂಸದರನ್ನು ಕಳುಹಿಸಿದರೂ ರಾಜ್ಯದ ಪರವಾಗಿ ಒಬ್ಬರೂ ಬಾಯಿ ಬಿಡಲಿಲ್ಲ. ರಾಜ್ಯಕ್ಕೆ ಅನ್ಯಾಯವಾದಾಗ, ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಮೋದಿ ಎದುರು ಮಾತನಾಡಲು ನಡುಗುವ ರಾಜ್ಯದ ಬಿಜೆಪಿ ಸಂಸದರಿಗೆ ಭಯವಿದೆ. ಮಂತ್ರಿಯಾದರೂ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕೂಡ ಮಾತನಾಡಲಿಲ್ಲ ಎಂದರು.
ಮನಮೋಹನ ಸಿಂಗ್ ಸರಕಾರ ಇದ್ದಾಗ ದೇಶದ ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ನಾನು ಮುಖ್ಯಮಂತ್ರಿ ಇದ್ದಾಗ ರಾಜ್ಯದ ರೈತರು ಸೊಸೈಟಿಗಳಲ್ಲಿ ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲ ಮಾಡಿದ್ದು, ಇದರಿಂದ 27 ಲಕ್ಷ ರೈತರಿಗೆ ಲಾಭವಾಗಿ, ಒಟ್ಟು 8,145 ಕೋ. ರೂ. ಮನ್ನಾ ಮಾಡಿದ್ದೆ. ರೈತರ ಸಾಲಮನ್ನಾ ಮಾಡಿ ಎಂದರೆ ಯಡಿಯೂರಪ್ಪ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದಿದ್ದರು. ಮೋದಿ ಸರಕಾರ ಅಂಬಾನಿ, ಅದಾನಿ ಅಂಥವರಿಗೆ ಸೇರಿದ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ ಬಂಡವಾಳ ಶಾಹಿಗಳ ಪರ ನಿಂತಿದ್ದಾರೆ ಎಂದು ಹೇಳಿದರು.