Advertisement

ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುಖಂಡರ ಮುತ್ತಿಗೆ ಯತ್ನ

02:57 PM Jan 13, 2018 | Team Udayavani |

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ, ಆರೆಸ್ಸೆಸ್‌, ಭಜರಂಗದಳವನ್ನು ಉಗ್ರಗಾಮಿ ಸಂಘಟನೆಗಳು ಎಂದು ನೀಡಿದ ಹೇಳಿಕೆ ಖಂಡಿಸಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ತಡೆದ ಪೊಲೀಸರು, ಬಂಧಿಸಿ ನಂತರ ಬಿಡುಗಡೆ ಮಾಡಿದರು.

Advertisement

ನಗರದ ರಂಗಮಂದಿರದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಕಾಂಗ್ರೆಸ್‌ ಕಚೇರಿಯತ್ತ ತೆರಳಿದರು. ಬಿಗಿ ಬಂದೋಬಸ್ತ್ ಕಲ್ಪಿಸಿದ್ದ ಪೊಲೀಸರು ಮಾರ್ಗ ಮಧ್ಯದಲ್ಲಿಯೇ ಅವರನ್ನು ತಡೆದರು. ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಾನಿರತರು ಮಾತಿನ ಚಕಮಕಿ ನಡೆಸಿದರು. ಈ ವೇಳೆ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಬಸ್‌ನಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಮುಖಂಡರು, ಸಿಎಂ ಸಿದ್ದರಾಮಯ್ಯ ಬಿಜೆಪಿ, ಹಿಂದುಪರ ಹೋರಾಟ ಮಾಡುವ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಜನರಿಂದ ಚುನಾಯಿತಗೊಂಡು ಆಡಳಿತ ನಡೆಸುತ್ತಿದೆ. ಕೇಂದ್ರದಲ್ಲೂ ಅಧಿಕಾರದಲ್ಲಿದೆ. ಆದರೆ, ಅಂಥ ಪಕ್ಷದ ಬಗ್ಗೆ
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಹಗುರವಾಗಿ ಮಾತನಾಡುವುದು ಖಂಡನಾರ್ಹ.  ಸಿದ್ದರಾಮಯ್ಯ ಹಿಂದೂ ವಿರೋಧಿ  ಎಂಬುದನ್ನು ಆ ಮೂಲಕ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ, ಆರ್‌ಎಸ್‌ಎಸ್‌, ಭಜರಂಗದಳ ಬಗ್ಗೆ ಯಾವುದೇ ಅರಿವಿಲ್ಲದೆ ಮಾತನಾಡಿದ್ದಾರೆ. ಉಗ್ರಗಾಮಿಗಳು ಎಂಬ ಪಟ್ಟ ಕಟ್ಟುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಕೋಮು ವಿರೋಧಿ ಎನ್ನುವುದನ್ನು ಸಾಬೀತು ಪಡಿಸಿದೆ. ಇಂಥ ಹೇಳಿಕೆಗಳನ್ನು ಎಂದಿಗೂ ಸಹಿಸಲಾಗದು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಶಾಸಕ ತಿಪ್ಪರಾಜು ಹವಾಲ್ದಾರ, ಮಾಜಿ ಶಾಸಕರಾದ ಎ. ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ, ಮುಖಂಡರಾದ ಎನ್‌. ಶಂಕ್ರಪ್ಪ, ಗಂಗಾಧರ ನಾಯಕ, ಅಶೋಕ ಗಸ್ತಿ, ಕೆ.ಎಂ. ಪಾಟೀಲ, ಎ. ಚಂದ್ರಶೇಖರ, ಯು. ದೊಡ್ಡ ಮಲ್ಲೇಶ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next