Advertisement

ಪ್ರಶ್ನೆಗಳಿಗೆ ನೇರ ಉತ್ತರ ಕೊಡದ ಬಿಜೆಪಿ ನಾಯಕರು: ಕಾಂಗ್ರೆಸ್‌ ಟೀಕೆ

10:16 PM Nov 17, 2021 | Team Udayavani |

ಬೆಂಗಳೂರು: ವಿದ್ವತ್‌ ಮೇಲಿನ ಹಲ್ಲೆ ಪ್ರಕರಣ ಸಂದರ್ಭದಲ್ಲೇ ಶ್ರೀಕಿ ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸುವ ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ ಮೇಲಾದರೂ ಯಾಕೆ ಬಂಧಿಸಲಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Advertisement

ಬಿಜೆಪಿ ಸರ್ಕಾರದಲ್ಲಿ ಎರಡು ವರ್ಷ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಗೊತ್ತಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡದೆ ಸತ್ಯ ಮರೆ ಮಾಚುವ ಕೆಲಸದಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ಅದಕ್ಕಾಗಿಯೇ ಹಲವರನ್ನು ನಿಯೋಜಿಸಿದಂತಿದೆ ಎಂದು ದೂರಿದೆ.

ಬಿಟ್‌ ಕಾಯಿನ್‌ ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಆದರೆ, ನಂತರ ಪೊಲೀಸ್‌ ಆಯುಕ್ತರ ಹೇಳಿಕೆಯಲ್ಲಿ ಏನೂ ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪದಲ್ಲಿ ಪ್ರಸ್ತಾಪಿಸಿಲ್ಲ. ಇದಕ್ಕೆ ಯಾಕೆ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಕೇಳಿದೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಪ್ರಿಯಾಂಕ್‌ ಖರ್ಗೆ, ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಲಪಾಡ್‌ ಅವರು ಶಾಸಕರ ಮಗನಾಗಿದ್ದರೂ ಅವರನ್ನು ತಕ್ಷಣ ಬಂಧಿಸಲಾಗಿತ್ತು. ಶ್ರೀಕಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಆರೋಪಪಟ್ಟಿ ಸಲ್ಲಿಸಿದ್ದೆವು. ಆಗ ಹೋಟೆಲ್‌ ನಲ್ಲಿ ಕೇವಲ ಹಲ್ಲೆ ನಡೆದಿತ್ತು. ಅಂದು ಬಿಟ್‌ ಕಾಯಿನ್‌ ವಿಚಾರ ಬಂದಿರಲಿಲ್ಲ. ಇದು ಬಿಜೆಪಿಗೆ ಅರ್ಥವಾಗಿಲ್ಲವೇ. ಅಂದು ಯಾವ ಪ್ರಕರಣ ದಾಖಲಾಗಿತ್ತೋ ಅದರ ಮೇಲೆ ನಾವು ವಿಚಾರಣೆ ಮಾಡಿದ್ದೆವು. ಒಂದೊಮ್ಮೆ ನಮ್ಮಿಂದ ಲೋಪ ಆಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಾದರೂ ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಪಟಾಕಿ ಸಿಡಿಸಿ ಗಾಯಗೊಳಿಸಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

Advertisement

ಬಿಟ್‌ ಕಾಯಿನ್‌ ಹಗರಣ ಹೇಗೆ ಶುರುವಾಯ್ತು, ಇದಕ್ಕೆ ಕಾರಣಕರ್ತರು ಯಾರು, ಈ ಬಗ್ಗೆ ಗೊತ್ತಿದ್ದರೂ ಸರ್ಕಾರ ಸುಮ್ಮನಿರುವುದೇಕೆ. ಬಿಟ್‌ ಕಾಯಿನ್‌ ಹಗರಣ 2016ರಿಂದ ನಡೆದಿದೆ.ಕಾಂಗ್ರೆಸ್‌ ಶಾಸಕರ ಮಕ್ಕಳಾದ ನಲಪಾಡ್‌, ದರ್ಶನ್‌ ಲಮಾಣಿ ಹೆಸರು ಕೇಳಿಬರುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾವು ಒತ್ತಾಯ ಮಾಡುತ್ತಲೇ ಇದ್ದೇವೆ. ಆದರೂ ಸರ್ಕಾರ ಯಾಕೆ ಇವರನ್ನು ಬಂಧಿಸುತ್ತಿಲ್ಲ ಎಂದರು.

ಬಿಟ್‌ ಕಾಯಿನ್‌ ಹಗರಣ ಮೊದಲು ಬೆಳಕಿಗೆ ಬಂದಿದ್ದೆ ನ.29, 2020ರಲ್ಲಿ ಶ್ರೀಧರ್‌ ಪೂಜಾರಿ ಅವರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ನಂತರ. ಅಮೆರಿಕ, ಮಲೇಷ್ಯಾ, ನೆದರ್ಲೆಂಡ್‌ ಸೇರಿದಂತೆ ವಿದೇಶಗಳಲ್ಲಿ ಹ್ಯಾಕ್‌ ಆಗಿರುವ ವಿಚಾರ ತಿಳಿಯುತ್ತದೆ.

ಆದರೆ 2016ರಲ್ಲೇ ಹಗರಣ ನಡೆದಿತ್ತು ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ.

ಬಿಜೆಪಿ ನಾಯಕರು ಒಂದೊಂದು ದಿನ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣವೇ ಇಲ್ಲ ಎನ್ನುತ್ತಾರೆ, ಸಿಐಡಿ ಮೂಲಕವೇ ತನಿಖೆ ನಡೆಯಲಿ ಎನ್ನುತ್ತಾರೆ. ಇದೆಲ್ಲಾ ನೋಡಿದರೆ ಏನನ್ನೋ ಮುಚ್ಚಿಡುವ ಯತ್ನವಂತೂ ನಡೆದಿದೆ ಎಂದು ದೂರಿದರು.

ಸಿಬಿಐ, ಇಡಿ, ಸಿಸಿಬಿ, ಸಿಬಿಐ ತನಿಖೆಯಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದು ನ್ಯಾಯಾಧೀಶರಿಂದ ತನಿಖೆ ನಡೆಯಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಎಲ್ಲಿಗೆ ಹೋಗಿದ್ದಾರೆ. ಈ ವಿಚಾರವಾಗಿ ಅವರು ತುಟಿಪಿಟಿಕ್‌ ಎನ್ನುತ್ತಿಲ್ಲ . ಪಕ್ಷದ ಅಧ್ಯಕ್ಷರಾಗಿ ಒಂದೂ ಮಾತು ಆಡಿಲ್ಲದಿರುವುದು ಏಕೆ ಎಂದು ಕೇಳಿದರು.

ಪ್ರತಾಪ ಸಿಂಹ ಏನೇನೋ ಹೇಳುತ್ತಾರೆ. ನಮ್ಮ ಹೆಸರಿನ ಬಗ್ಗೆ ಮಾತನಾಡಿದ್ದಾರೆ. ಪ್ರತಾಪ ಎಂದರೆ ಡಿಗ್ನಿಟಿ ಎಂದು ಆದರೆ, ಅವರು ಆ ರೀತಿ ಇಲ್ಲವಲ್ಲಾ. ಮರಿ ಖರ್ಗೆ ಎಂದು ನನ್ನನ್ನು ಕರೆಯುತ್ತೀರಿ, ಜಯ್‌ಶಾಗೆ ಚೋಟಾ ಶಾ ಎಂದು ಕರೆಯುತ್ತೀರಾ, ವಿಜಯೇಂದ್ರಗೆ ಮರಿ ಬಿಎಸ್‌ವೈ ಎನ್ನುತ್ತೀರಾ. ಪ್ರತಾಪಸಿಂಹ ಉತ್ತರನ ಪೌರುಷ ಒಲೆ ಮುಂದೆ ಇದ್ದಂತೆ. ಉತ್ತರ ಇಲ್ಲದ್ದಕ್ಕೆ ವೈಯಕ್ತಿಕ ದಾಳಿಗೆ ಬಂದಿದ್ದಾರೆ. ಅವರಿಗೆ ಕನ್ನಡವೂ ಮಾತನಾಡಲು ಬರುವುದಿಲ್ಲ, ಇಂಗ್ಲೀಷ್‌ ಸಹ ಸರಿಯಾಗಿ ಬರುವುದಿಲ್ಲ.
– ಪ್ರಿಯಾಂಕ್‌ ಖರ್ಗೆ

 

Advertisement

Udayavani is now on Telegram. Click here to join our channel and stay updated with the latest news.

Next