Advertisement

CM ಸವಾಲಿಗೆ ಬಿಜೆಪಿ ನಾಯಕರ ತಿರುಗೇಟು

08:46 PM Aug 06, 2023 | Team Udayavani |

ಬೆಂಗಳೂರು: ಮೊದಲು ಭ್ರಷ್ಟಾಚಾರರಹಿತ ಆಡಳಿತ ನೀಡಿ, ನಂತರ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕುವಿರಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

Advertisement

ಕರ್ನಾಟಕದಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೊಡಲು ಸಾಧ್ಯವೇ ಎಂದು ಸವಾಲು ಹಾಕಿದ್ದ ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ಮುಖಂಡರು ಮರುಸವಾಲೆಸೆದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಕರ್ನಾಟಕದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿರುವಂತೆಯೇ ದೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಅವರಿಗೆ ಸವಾಲ್‌ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ 3 ತಿಂಗಳು ಕಳೆಯುವುದರೊಳಗೆ ವರ್ಗಾವಣೆ ದಂಧೆ ಶುರುವಾಗಿದೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಹೊಸ ಯೋಜನೆಗಳ ಜಾರಿಗೆ ಅನುದಾನದ ಕೊರತೆ ಉಂಟಾಗಿದೆ ಎಂದು ನಿಮ್ಮವರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ನಿಮ್ಮಿಂದ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವೇ? ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವೇ? ಪಾರದರ್ಶಕ ಆಡಳಿತ ನಡೆಸಲು ಸಾಧ್ಯವೇ? ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ರಾಜಕೀಯ ದ್ವೇಷಪೂರಿತ ಆಡಳಿತ ರಾಜ್ಯದ ಸ್ಥಿತಿಯನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದನ್ನು ಒಮ್ಮೆ ಯೋಚಿಸಿ ಎಂದು ತಿರುಗೇಟು ನೀಡಿದ್ದಾರೆ.

ಮೋದಿಯವರಿಂದ ಭ್ರಷ್ಟಾಚಾರ ರಹಿತ ಆಡಳಿತ
ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಆರ್ಥಿಕತೆ ಸದೃಢತೆ ತಂದಿದ್ದಾರೆ. ಮೋದಿಯವರು ಆರ್ಥಿಕತೆ ಹಾಳು ಮಾಡಿದ್ದಾರೆ ಎನ್ನುವ ಸಿದ್ದರಾಮಯ್ಯ ಅವರಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದ್ದು ಮರೆತುಹೋಗಿದೆಯೇ? ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಹಾಕಿದ್ದಾರೆ.
ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಆರೋಪ ಯುಪಿಎ ಸರ್ಕಾರದ ಮೇಲೆ ಇತ್ತು. ಆಕಾಶ, ಭೂಮಿ ನೀರಿನಲ್ಲಿ ಹಗರಣ ಇತ್ತು. ಎಲ್ಲೆಡೆ ಹಗರಣಗಳ ಸುರಿಮಳೆ ಇತ್ತು.

Advertisement

ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ನಿಧಿ ಇದೆ. 573 ಬಿಲಿಯನ್‌ ಡಾಲರ್‌ ವಿದೇಶಿ ವಿನಿಮಯ ಫ‌ಂಡ್‌ ಇದೆ. 543 ಬಿಲಿಯನ್‌ ಡಾಲರ್‌ ಗೋಲ್ಡ್‌ ನಿಧಿ ಇದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ. ಇದು ಭಾರತದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಗೆ ಹಣ ಇಲ್ಲ ಅಂತ ನೀವೇ ಶಾಸಕರಿಗೆ ಹೇಳಿದ್ದೀರಿ, ನಮ್ಮ ಉಪ ಮುಖ್ಯಮಂತ್ರಿ ಕೂಡ ಅಭಿವೃದ್ಧಿಗೆ ಹಣ ಕೇಳಬೇಡಿ ಅಂತ ಹೇಳಿದ್ದಾರೆ. ನಮ್ಮ ಸರ್ಕಾರ ಸದೃಢ ಆರ್ಥಿಕತೆ ಮಾಡಿದ್ದರಿಂದ ನೀವು ಗ್ಯಾರಂಟಿಗಳನ್ನು ಕೊಡುತ್ತಿದ್ದೀರಿ, ಅವುಗಳಲ್ಲಿಯೂ ಷರತ್ತುಗಳನ್ನು ವಿಧಿಸಿದ್ದೀರಿ. ನಿಮ್ಮ ವೈಫ‌ಲ್ಯ ಮುಚ್ಚಿಕೊಳ್ಳಲು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ.
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next