ಹೈದರಾಬಾದ್: ಪಂಚರಾಜ್ಯ ಚುನಾವಣೆ ಹೊಸ್ತಿಲಿನ ಲ್ಲಿರುವಂತೆಯೇ ರಾಜಕೀಯ ಪಕ್ಷಗಳ ಪ್ರಚಾರ, ವಾಗ್ಯುದ್ಧ, ಹಗ್ಗಜಗ್ಗಾಟ ಗರಿಗೆದರಿದ್ದು ತೆಲಂಗಾಣದಲ್ಲಿ ಬಿಜೆಪಿ ನಾಯಕರನ್ನು ಬಾಲಿವುಡ್ ಹೀರೋಗಳಿಗೆ ಹೋಲಿಸಿ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರೆ. ಅತ್ತ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನಿಜಾಮಾಬಾದ್ ಮತ್ತು ಜಗಿತ್ಯಾಲ್ ಜಿಲ್ಲೆಗಳ ವಿವಿಧೆಡೆ ಮಾತನಾಡಿದ ರಾಹುಲ್ ಗಾಂಧಿ “ರಾಜ್ಯದಲ್ಲಿ ಜಟಾಪಟಿ ಇರುವುದು ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗೆ ಆದರೆ ಬಿಜೆಪಿಗರು ಬಾಲಿವುಡ್ ಹೀರೋಗಳಂತೆ ಓಡಾಡುತ್ತಿದ್ದರು. ಅವರ ಗಾಡಿಯ ನಾಲ್ಕೂ ಚಕ್ರ ಕಳಚಿರುವುದು ಅವರಿಗೆ ಗೊತ್ತೇ ಆಗಲಿಲ್ಲ. ಈಗ ಕಾಂಗ್ರೆಸ್‌ಗೆ ಸೇರಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ! ಆದರೆ ನಮಗೆ ಅವರುಗಳು ಬೇಕಿಲ್ಲ’ ಎಂದಿದ್ದಾರೆ.
ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಸಚಿವ ಅನುರಾಗ್ “ಛತ್ತೀಸ್‌ಗಢದ ಜನತೆ ಯು ಸಿಎಂ ಬಘೇಲ್ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಸರಕಾರ ಎಂದರೆ ಅದು ಕೇವಲ ಹಗರಣ ಮತ್ತು ಮಾಫಿಯಾ ಎಂದು ಚಾಟಿ ಬೀಸಿದ್ದಾರೆ.
ಬಿಜೆಪಿ ಅಧಿಕಾರ ದಾಹಿ !: ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸಾರ್ವಜನಿಕ ರ್ಯಾಲಿಯಲ್ಲಿ ಮೋದಿ ಸರಕಾರವನ್ನು ಟೀಕಿಸಿದ ಅವರು “ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕೇವಲ ತನ್ನ ಉದ್ಯಮಿ ಸ್ನೇಹಿತರಿಗಾಗಿ ಕೆಲಸ ಮಾಡುತ್ತದೆ. ಮೋದಿ ಮತ್ತು ಬಿಜೆಪಿಯ ಗುರಿ ನಿಮ್ಮ ಅಭಿವೃದ್ಧಿಯಲ್ಲ, ಬರೀ ಅಧಿಕಾರ ಮಾತ್ರ’ ಎಂದು ದೂರಿದ್ದಾರೆ.
2 ಪಟ್ಟಿ ರಿಲೀಸ್: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 88 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೊಷಿಸಿದ್ದು, ಆಮ್ಲಾ ಕ್ಷೇತ್ರದ ಸ್ಥಾನಕ್ಕೆ ಮಾತ್ರ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ. ಸಮಾಜವಾದಿ ಪಕ್ಷ ಕೂಡ ತನ್ನ 3ನೇ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದೆ.