ಜಮ್ಮು:ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಜಮ್ಮುವಿನ ಸುತೇತ್ ಗಢ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಮಾಜಿ ಸಚಿವ ಶ್ಯಾಮ್ ಲಾಲ್ ಚೌಧರಿ ಅವರು ಕೇವಲ 11 ಮತಗಳ ಅಂತರದಿಂದ ಪರಾಜಯಗೊಂಡಿರುವುದಾಗಿ ಚುನಾವಣಾಧಿಕಾರಿಗಳು ಬುಧವಾರ(ಡಿಸೆಂಬರ್ 23, 2020) ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿಗೆ ಚುನಾವಣೆ ನಡೆದಿತ್ತು.
ಚುನಾವಣಾಧಿಕಾರಿಗಳು ನೀಡಿರುವ ಅಂಕಿ ಅಂಶದ ಪ್ರಕಾರ, ಬಿಜೆಪಿ ಬೆಂಬಲಿತ ಶ್ಯಾಮ್ ಲಾಲ್ ಚೌಧರಿ ಅವರಿಗೆ 12,948 ಮತಗಳು ಚಲಾವಣೆಯಾಗಿದ್ದು, ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ತರಣ್ ಜಿತ್ ಸಿಂಗ್ 12,969 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗು ಬೀರಿದ್ದಾರೆ.
ಶ್ಯಾಮ್ ಲಾಲ್ ಚೌಧರಿ ಅವರು ಬಿಜೆಪಿ-ಪಿಡಿಪಿ ಮೈತ್ರಿಕೂಟದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಆರ್ ಎಸ್ ಪುರ್ ಪ್ರದೇಶದಲ್ಲಿ ಪ್ರಭಾವಿ ಮುಖಂಡರಾಗಿದ್ದ ಶ್ಯಾಮ್ ಲಾಲ್ ಅವರು 2008- 2014ರಲ್ಲಿ ಸುಚೇತ್ ಗಢ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಚುನಾವಣೆಯಲ್ಲಿ ಫಾರೂಖ್ ಅಬ್ದುಲ್ಲಾ ನೇತೃತ್ವದ ಗುಪ್ಕಾರ್ ಮೈತ್ರಿಕೂಟ 112 ವಾರ್ಡ್ ಗಳಲ್ಲಿ ಮೇಲುಗೈ ಸಾಧಿಸಿದ್ದು, ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಜಮ್ಮುವಿನಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು ಎರಡು ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ ಎಂದು ವರದಿ ತಿಳಿಸಿದೆ.