Advertisement

ಪ್ರವಾಹವಾದಾಗ ಬಾರದ ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ಓಡಿಬಂದಿದ್ದಾರೆ:ಸತೀಶ್ ಜಾರಕಿಹೊಳಿ

04:29 PM Aug 30, 2021 | Team Udayavani |

ಬೆಳಗಾವಿ: ಕಳೆದೆರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಬರಲಿಲ್ಲ. ಆದರೆ, ಈಗ ಚುನಾವಣಾ ಪ್ರಚಾರಕ್ಕೆ ಎಲ್ಲರೂ ಓಡಿ ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಹ ಬಂದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರಿದ್ದರೂ ಕೂಡ ಒಬ್ಬರೂ ಕೋವಿಡ್ ನಿರ್ವಹಣೆ ಹಾಗೂ ಪ್ರವಾಹದ ಕುರಿತು ಒಂದು ಸಭೆಯನ್ನೂ ನಡೆಸಿರಲಿಲ್ಲ. ಜನರಿಗೆ ಸಾಂತ್ವನ ಹೇಳಲು, ಪರಿಹಾರ ಕೊಡಿಸಲು ಪ್ರಯತ್ನಿಸಲಿಲ್ಲ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ನಾನು ಉಸ್ತುವಾರಿ ಸಚಿವನಾಗಿದ್ದಾಗ ಆಗಿನ ಶಾಸಕ ಫಿರೋಜ್ ಸೇಠ್ ಅವರ ಅವರೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬಾಕ್ಸೈಟ್ ರಸ್ತೆ, ಕಣಬರ್ಗಿ ರಸ್ತೆ ನಿರ್ಮಿಸಿದ್ದೇವೆ. ಉದ್ಯಾನವನ, ಜಿಮ್, ಕ್ರೀಡಾಂಗಣಗಳನ್ನು ನಿರ್ಮಿಸಿದ್ದೇವೆ. ಆದರೆ, ರಾಜಕೀಯ ಕಾರಣದಿಂದ ಈವರೆಗೂ ಅವುಗಳ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೋವಿಡ್ ಪ್ರಕರಣ ಇಳಿಮುಖ : ಸೆ.1 ರಿಂದ ಉಡುಪಿ ಜಿಲ್ಲೆಯಾದ್ಯಂತ ಶಾಲಾ – ಕಾಲೇಜು ಆರಂಭ

ನಗರದಲ್ಲಿರುವ ಯಡಿಯೂರಪ್ಪ ಮಾರ್ಗದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಅದನ್ನು ಪೂರ್ಣಗೊಳಿಸಿದ್ದೆ ನಾವು. ನಂತರ ಬಿಜೆಪಿಯವರು ಅಲ್ಲಿ ಯಡಿಯೂರಪ್ಪ ಮಾರ್ಗ ಎಂದು ಕೈಯಿಂದ ಬರೆದು ಬೋರ್ಡ್ ಹಾಕಿದ್ದರು ಎಂದು ಟೀಕಿಸಿದರು.

Advertisement

ಮಾಜಿ ಸಚಿವ ಎಂ ಬಿ ಪಾಟೀಲ ಮಾತನಾಡಿ, ಉಚಿತ ಶವಸಂಸ್ಕಾರ ಎಂದರೇ ಏನರ್ಥ? ಬಿಜೆಪಿಯವರು ಜನರ ಸಾವನ್ನೇ ಬಯಸುತ್ತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಗೋವಿಂದ ಕಾರಜೋಳ ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಉಚಿತ ಶವಸಂಸ್ಕಾರ ವಿಷಯದಿಂದ ಜನರಿಗೆ ನೋವಾಗಿದ್ದರೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಉದ್ಯೋಗ ನಷ್ಟ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ, ಬೆಲೆ ಏರಿಕೆಯ ಕುರಿತು ಸಹ ಕಾರಜೋಳ ಹಾಗೂ ಬಿಜೆಪಿಗರು ಉತ್ತರಿಸಬೇಕು ಎಂದು ಪಾಟೀಲ ಅವರು ಸವಾಲು ಹಾಕಿದರು.

ಕೋವಿಡ್ ಸಂದರ್ಭದಲ್ಲಿ ತಾವು ನೀಡಿರುವ ಆಕ್ಸಿಜನ್ ಸಿಲಿಂಡರ್, ಬೆಡ್, ಔಷಧಿಗಳ ಬಗ್ಗೆ ಬಿಜೆಪಿಯವರು ಹೇಳಬೇಕಾಗಿತ್ತು. ಆದರೆ, ಶವ ಸಂಸ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ದೇಶದಲ್ಲಿರುವ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ, ದೊಡ್ಡ ದೊಡ್ಡ ಡ್ಯಾಂ ಗಳನ್ನು ಯಾರು ನಿರ್ಮಿಸಿದ್ದು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next