Advertisement

ದಶಕದ ಜ್ವಾಲಾಮುಖಿ ಈಗ ಸ್ಫೋಟ!

11:44 PM Apr 03, 2023 | Team Udayavani |

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಬಹಿರಂಗವಾಗಿ ಸೊ#ಧೀಟಗೊಂಡಿರುವುದು ಈಚೆಗೆ ಆದರೂ ಅಸಮಾಧಾನದ ಜ್ವಾಲಾಮುಖಿ ದಶಕಗಳಿಂದಲೇ ಒಡಲಲ್ಲಿ ಕುದಿಯುತ್ತಿತ್ತು.

Advertisement

ಶಿವಮೊಗ್ಗ ಬಿಜೆಪಿಯಲ್ಲಿ ಎಂತಹದ್ದೇ ಅಸಮಾಧಾನಗಳು ಇದ್ದರೂ ಬಹಿರಂಗಗೊಳ್ಳುತ್ತಿರಲಿಲ್ಲ. ಕಾಲ ಈಗ ಬದಲಾಗಿದೆ. ಈಶ್ವರಪ್ಪ ತಮ್ಮ ಮಗನ ಪರ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಆಯನೂರು ನನಗೆ ಟಿಕೆಟ್‌ ಕೊಡಿ ಎಂದು ಪಕ್ಷಕ್ಕೆ ಬಹಿರಂಗ ಬೇಡಿಕೆ ಇರಿಸಿದರು.

ಅಲ್ಲಿಂದ ಆರಂಭವಾದ ಮಾತಿನ ಯುದ್ಧ ಈಗ ಮತ್ತೂಂದು ಹಂತಕ್ಕೆ ತಲುಪಿದೆ. ಆಯನೂರು 26 ವರ್ಷಗಳಿಂದ ಶಾಸಕರಾಗಿ, ಲೋಕಸಭೆ ಸದಸ್ಯರಾಗಿ, ರಾಜ್ಯಸಭೆ ಸದಸ್ಯರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದವರು. ಶಿವಮೊಗ್ಗ ನಗರದಿಂದಲೇ ರಾಜಕೀಯ ಪ್ರವೇಶ ಮಾಡಿದವರು. ಅವರಿಗೆ ಮೊದಲಿನಿಂದಲೂ ಶಿವಮೊಗ್ಗ ಕ್ಷೇತ್ರದ ಮೇಲೆ ಒಲವಿತ್ತು. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ವಿವಿಧ ವೇದಿಕೆಗಳಲ್ಲಿ ಸ್ಪ ರ್ಧಿಸಿ ಗೆದ್ದಿದ್ದರು. ಕಳೆದೆರಡು ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಈಶ್ವರಪ್ಪನವರು ಅವಕಾಶ ಕೊಟ್ಟಿರಲಿಲ್ಲ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಅವರಿಗೆ ಟಿಕೆಟ್‌ ಬೇಡ ಎಂದು ಹೇಳಿದ್ದರು ಎಂಬ ಆರೋಪಗಳಿವೆ.

2019ರ ಬಿಜೆಪಿ ಸರಕಾರದಲ್ಲಿ ಸಚಿವರಾದ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿಯಾಗಿದ್ದರು. ಶಿವಮೊಗ್ಗ ನಗರದಲ್ಲಿ ನಡೆದ ಯಾವುದೇ ಸಭೆ-ಸಮಾರಂಭಗಳಿಗೆ ಆಹ್ವಾನ ನೀಡುತ್ತಿರಲಿಲ್ಲ. ಈ ಬಗ್ಗೆ ಎಷ್ಟೋ ಸಭೆಗಳಲ್ಲಿ ಆಯನೂರು ಅಧಿ ಕಾರಿಗಳಿಗೆ ಶಿಷ್ಟಾಚಾರದ ಪಾಠ ಮಾಡಿದ್ದರು. ವಿಧಾನ ಪರಿಷತ್‌ ಸದಸ್ಯರಿಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಸದನದಲ್ಲೂ ಚರ್ಚೆ ಮಾಡಿದ್ದರು. ಖುದ್ದು ಶಿಷ್ಟಾಚಾರ ಸಮಿತಿ ಅಧ್ಯಕ್ಷರಾಗಿದ್ದ ಅವರು ಸರಕಾರಕ್ಕೆ ವರದಿ ಕೂಡ ನೀಡಿದ್ದರು. ಅದಾದ ಮೇಲೆ ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆದಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ. ಶಿವಮೊಗ್ಗದಲ್ಲಿ ಎಂಎಲ್‌ಸಿಗಳಾದ ಎಸ್‌. ರುದ್ರೇಗೌಡ, ಆಯನೂರು ಮಂಜುನಾಥ್‌ ಅವರನ್ನು ನಿರ್ಲಕ್ಷ್ಯ ಮಾಡುವುದು ಮುಂದುವರಿಯಿತು. ಗುಂಪುಗಾರಿಕೆ, ಕಡೆಗಣನೆಗೆ ಈಶ್ವರಪ್ಪ ಕುಮ್ಮಕ್ಕು ಕೂಡ ಇತ್ತು ಎನ್ನಲಾಗಿದೆ.

ಆಯನೂರು ಬಂಡಾಯಕ್ಕೆ ಬೆಂಬಲವಾಗಿ ನಿಂತಿರುವುದು ಬಿಜೆಪಿಯ ಪ್ರಮುಖ ಮುಖಂಡರೇ ಎಂಬುದು ಬಹಿರಂಗ ಸತ್ಯ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್‌ ಕೇಳದೆ ಮಗನಿಗೆ ಟಿಕೆಟ್‌ ಕೇಳಿದ್ದಾರೆ ಎಂದು ತಿಳಿಯುತ್ತಿದ್ದಂತೆ ಬಹುತೇಕ ಆಕಾಂಕ್ಷಿಗಳು ಒಂದಾಗಿದ್ದಾರೆ. ನಮ್ಮದು ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವರದು ಎರಡೂ ಕಣ್ಣು ಹೋಗಲಿ ಎಂಬಂತಿದೆ ನಡೆ. ಈಶ್ವರಪ್ಪನವರಿಂದ ತುಳಿತಕ್ಕೆ ಒಳಗಾದ ಕೆಲವು ಕಾರ್ಪೋರೆಟರ್‌ಗಳ ಏನಾದರೂ ಮಾಡಿ ಟಿಕೆಟ್‌ ತಪ್ಪಿಸಬೇಕೆಂಬ ಯತ್ನಕ್ಕೆ ಅನ್ಯ ಪಕ್ಷದ ನಾಯಕರೂ ಬೆಂಬಲ ನೀಡಿದ್ದಾರೆ. ಆಯನೂರು ಇಷ್ಟು ಗಟ್ಟಿ ಧ್ವನಿಯಲ್ಲಿ ಟಿಕೆಟ್‌ ಕೇಳುತ್ತಿರುವುದನ್ನು ನೋಡಿದರೆ ಈಶ್ವರಪ್ಪನವರಿಗೆ ಖೆಡ್ಡಾ ತೋಡಲು ದೊಡ್ಡ ತಂಡವೇ ಸಿದ್ಧವಾದಂತಿದೆ.

Advertisement

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಹರಿಹಾಯುವುದು, ಪತ್ರ ಬರೆಯುವುದು ಮಾಡಿದಾಗಲೆಲ್ಲ ಆಯನೂರು ಬಿಎಸ್‌ವೈ ಪರವಾಗಿ ನಿಂತಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ-ಕಾಂಗ್ರೆಸ್‌ ಹಣಾಹಣಿಯಲ್ಲಿ ಈಶ್ವರಪ್ಪನವರು ಮೂರನೇ ಸ್ಥಾನ ಪಡೆದಿದ್ದರು. ಆಗ ಕೆಜೆಪಿಯಿಂದ ಸ್ಪ ರ್ಧಿಸಿದ್ದ ಎಸ್‌. ರುದ್ರೇಗೌಡರ ಪರ ಬ್ಯಾಟಿಂಗ್‌ ಮಾಡಿದ್ದ ನಾಯಕರೆಲ್ಲ ಈಗ ಆಯನೂರು ಮಂಜುನಾಥ್‌ ಜತೆ ಇದ್ದಾರೆ ಎಂಬುದು ಅಷ್ಟೇ ಸತ್ಯ.

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next