Advertisement

ಕತ್ತಿ ವರಸೆ’ಹಿಂದಿನ ಕಹಾನಿ

01:01 AM Aug 23, 2019 | Sriram |

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸಚಿವಗಿರಿ ಸಿಗದ ಕಾರಣ ಮುನಿಸಿಕೊಂಡಿರುವ ಬೆಳಗಾವಿಯ ಉಮೇಶ್‌ ಕತ್ತಿಯನ್ನು ಸೆಳೆಯಲು ಸಮ್ಮಿಶ್ರ ಸರ್ಕಾರದಲ್ಲೇ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆದಿತ್ತು.

Advertisement

ಕಳೆದ ವರ್ಷ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆದ ಸಂದರ್ಭದಲ್ಲಿ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಆ ವೇಳೆಗಾಗಲೇ ಸರ್ಕಾ ರದ ವಿರುದ್ಧ ಬಂಡಾಯ ಸಾರಿದ್ದರಿಂದ ಜಾರಕಿ ಹೊಳಿ ಕುಟುಂಬಕ್ಕೆ ‘ಟಾಂಗ್‌’ ನೀಡಲು ಉಮೇಶ್‌ ಕತ್ತಿಗೆ ಗಾಳ ಹಾಕಲಾಗಿತ್ತು.

ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಉಮೇಶ್‌ ಕತ್ತಿ ಜತೆ ಮಾತನಾಡಿದ್ದರು. ಉಮೇಶ್‌ ಕತ್ತಿಯವರ ಜತೆಯಲ್ಲಿ ಹಾವೇರಿ, ರಾಯಚೂರು, ಚಿತ್ರ ದುರ್ಗ, ಕಲಬುರಗಿ ಭಾಗದ ಜನತಾಪರಿವಾರ ಮೂಲದ ಐವರು ಶಾಸಕರನ್ನು ಆಯಾ ಕ್ಷೇತ್ರದ ಸ್ಥಳೀಯ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಕ್ಕೆ ಸೇರಿಸಿಕೊಂಡು ಸಚಿವಗಿರಿ ನೀಡಲು ಚರ್ಚೆಗಳು ನಡೆದಿದ್ದವು.

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಿವರ್ಸ್‌ ಆಪರೇಷನ್‌ ಮಾಡಲು ತಯಾರಿ ನಡೆಸಿ ಉಮೇಶ್‌ ಕತ್ತಿ ಅವರ ಜತೆಯೂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು. ಪ್ರಮುಖ ಖಾತೆ ನೀಡುವ ಭರವಸೆಯೂ ಸಿಕ್ಕಿತ್ತು ಎಂದು ಮೂಲಗಳು ತಿಳಿಸಿವೆ.

ಉಮೇಶ್‌ ಕತ್ತಿ ಸೇರಿದಂತೆ ಐವರು ಬಿಜೆಪಿ ಶಾಸಕರಿಗೆ ಗಾಳ ಹಾಕಿರುವುದರ ಬಗ್ಗೆ ಮಾಹಿತಿ ಪಡೆದಿದ್ದ ಬಿ.ಎಸ್‌.ಯಡಿಯೂರಪ್ಪ, ಜನವರಿ ಯಲ್ಲಿ ಜಂಟಿ ಅಧಿವೇಶನದ ವೇಳೆಗೆ ಸಮ್ಮಿಶ್ರ ಸರ್ಕಾರ ಇರುವುದಿಲ್ಲ, ನಮ್ಮದೇ ಸರ್ಕಾರ ಬರಲಿದೆ. ನಿಮಗೆ ಸ್ಥಾನಮಾನವೂ ಸಿಗಲಿದೆ, ಪಕ್ಷ ಬಿಡುವ ಯೋಚನೆ ಮಾಡಬೇಡಿ ಎಂದು ಐವರಿಗೂ ತಿಳಿಸಿದ್ದರು. ಜತೆಗೆ, ಆಪರೇಷನ್‌ ಕಮಲ ಕಾರ್ಯಾಚರಣೆ ಸಂದರ್ಭದಲ್ಲೂ ಐವರ ಮೇಲೂ ಕಣ್ಣಿಡಲಾಗಿತ್ತು. ಯಡಿಯೂರಪ್ಪ ಅವರು ಮಾತುಕತೆ ನಡೆಸಿದ ನಂತರ ಉಮೇಶ್‌ ಕತ್ತಿ ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.

Advertisement

ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಆಪ್ತರ ಬಳಿ ತಮ್ಮ ಅಳಲು ತೋಡಿಕೊಂಡಿರುವ ಉಮೇಶ್‌ ಕತ್ತಿ ಮೊದಲು ಸಂಪರ್ಕ ಮಾಡಿದ್ದು ಕುಮಾರಸ್ವಾಮಿ ಯವರನ್ನು. ಬಸವರಾಜ ಹೊರಟ್ಟಿ ಅವರ ಜತೆಗಿನ ಮಾತುಕತೆಯ ನಂತರ ಉಮೇಶ್‌ ಕತ್ತಿ ಮೊದಲು ಸಂಪರ್ಕಿಸಿದ್ದೇ ಕುಮಾರಸ್ವಾಮಿಯವರನ್ನು. ಆದರೆ, ಕುಮಾರ ಸ್ವಾಮಿಯವರು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಹೇಳಿದರು ಎಂಬ ಮಾತುಗಳು ಕೇಳಿಬರುತ್ತಿವೆ.

ಕಾದು ನೋಡುತ್ತಿರುವ ಜೆಡಿಎಸ್‌

ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ನಂತರದ ಅತೃಪ್ತಿ, ಅಸಮಾಧಾನಿತರ ಹೇಳಿಕೆ, ಬಿಜೆಪಿ ಹೈಕಮಾಂಡ್‌ ಲೆಕ್ಕಾಚಾರ ಎಲ್ಲವನ್ನೂ ಕಾದು ನೋಡುತ್ತಿರುವ ಜೆಡಿಎಸ್‌, ಸದ್ಯದ ಪರಿಸ್ಥಿತಿಯಲ್ಲಿ ಮೌನ ವಹಿಸಲು ನಿರ್ಧರಿಸಿದೆ. ಕಾಂಗ್ರೆಸ್‌ನ ನಡೆ ನೋಡಿಕೊಂಡು ಆ ನಂತರ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಅನರ್ಹತೆಗೊಂಡಿರುವ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಲು ವಿಳಂಬವಾದರೆ, ಎರಡನೇ ಹಂತದ ಸಂಪುಟ ವಿಸ್ತರಣೆಗೆ ತಡ ಮಾಡಿದರೆ ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನ ಉಂಟಾಗಬಹುದು. ಇಲ್ಲವೇ ಕೇಂದ್ರ ಬಿಜೆಪಿ ನಾಯಕರು ಪರಿಸ್ಥಿತಿ ಕೈ ಮೀರಿದರೆ ಹೊಸದಾಗಿ ವಿಧಾನಸಭೆ ಚುನಾವಣೆಗೆ ಹೋಗಲು ನಿರ್ಧರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್‌ ಇದೆ. ಹೀಗಾಗಿ, ಸ್ವಲ್ಪ ದಿನದ ಮಟ್ಟಿಗೆ ಕಾದು ನೋಡಲು ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

-ಎಸ್‌. ಲಕ್ಷ್ಮಿನಾರಾಯಣ
Advertisement

Udayavani is now on Telegram. Click here to join our channel and stay updated with the latest news.

Next