Advertisement

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ : ಚುನಾವಣೆಗಳು ಸೇರಿ ಹಲವು ವಿಚಾರಗಳ ಕುರಿತು ಚಿಂತನ-ಮಂಥನ

10:20 PM Oct 06, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಶುಕ್ರವಾರ ಅರಮನೆ ಮೈದಾನದ ತ್ರಿಪುರ ನಿವಾಸಿನಿಯಲ್ಲಿ ನಡೆಯಲಿದ್ದು ರಾಜ್ಯದಲ್ಲಿ ಮುಂದೆ ಎದುರಾಗಲಿರುವ ಚುನಾವಣೆಗಳು ಸೇರಿ ಹಲವು ವಿಚಾರಗಳ ಕುರಿತು ಚಿಂತನ-ಮಂಥನ ನಡೆಯಲಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದ್ದು ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. “ಸಶಕ್ತ ಭಾರತಕ್ಕಾಗಿ ಸಮೃದ್ಧ ಕರ್ನಾಟಕ’ ಎಂಬ ಘೋಷಣೆಯೊಂದಿಗೆ ಇಡೀ ದಿನ ಕಾರ್ಯಕಾರಿಣಿ ಜರುಗಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಕಾರ್ಯಕಾರಿಣಿ ಶುಕ್ರವಾರ ಬೆಳಗ್ಗೆ 10.30ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ವಿಶೇಷ ಪ್ರದರ್ಶಿಕೆ ಏರ್ಪಡಿಸಲಾಗಿದೆ. ಬಿಜೆಪಿ ಬೆಳೆದು ಬಂದು ಹಾದಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತಂತೆ ಪ್ರದರ್ಶಿಕೆಯಲ್ಲಿ ಬೆಳಕು ಚೆಲ್ಲಲಾಗುವುದು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಗೋಪಿನಾಥ್‌ ರೆಡ್ಡಿ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

ಕಾರ್ಯಕಾರಿಣಿಯಲ್ಲಿ ರಾಜಕೀಯ, ಸಂಘಟನಾತ್ಮಕ ವಿಚಾರವಾಗಿ ವಿಶ್ಲೇಷಣೆ ಹಾಗೂ ಚರ್ಚೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಚರ್ಚೆ, ಚಿಂತನೆ ನಡೆದು ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಮುಂದಿನ 25 ವರ್ಷಗಳ ಅಮೃತ ಭಾರತಕ್ಕೆ ಕರ್ನಾಟಕದ ಕೊಡುಗೆ ಏನು ಎಂಬ ಬಗ್ಗೆ ರೋಡ್‌ ಮ್ಯಾಪ್‌ ಕೂಡ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ಧಗೊಳಿಸಲಾಗುವುದು. ಇದರ ಆಧಾರದಲ್ಲಿ ಮುಂದಿನ ಅಜೆಂಡಾ ರೂಪಿಸಲು ನಿರ್ಧಾರ ಮಾಡಲಾಗಿದೆ.
– ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಖರ್ಗೆ ಸ್ವಯಂ ಪ್ರೇರಿತವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಲ್ಲ
ಬೆಂಗಳೂರು: ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಯಂ ಪ್ರೇರಿತವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಲ್ಲ. ಬದಲಾಗಿ ಇನ್ನೊಬ್ಬರ ಮರ್ಜಿಗೆ ಒಳಗಾಗಿ ಜೀತ ಮನಸ್ಥಿತಿಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷರ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಡ್ರಾಮಾ ಆರಂಭವಾಗಿದೆ. ಈಗಾಗಲೇ ದೇಶ ವ್ಯಾಪಿ ಹಲವು ಕಾಂಗ್ರೆಸ್‌ ಶಾಸಕರು, ಮುಖಂಡರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಗುಜುರಾತ್‌, ಹಿಮಾಚಲ ಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಸಕರ ದಂಡು ಬಿಜೆಪಿಗೆ ಸೇರ್ಪಡೆ ಆಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಈಗಾಗಲೇ ಆಜಾದಿ ಘೋಷಿಸಿಕೊಂಡಿದ್ದಾರೆ. ಈ ವಿದ್ಯಮಾನಗಳನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ಬಲವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಜಾತಿ ಆಧಾರದಲ್ಲಿ ರಾಜಕಾರಣ ಮಾಡುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಜೆಂಡಾ ಅಲ್ಲ. ಸಾಮಾನ್ಯ ಸ್ವಯಂ ಸೇವಕ ತನ್ನ ಪರಿಶ್ರಮದಿಂದ ಆರ್‌ಎಸ್‌ಎಸ್‌ ಹುದ್ದೆ ಸೇರಿದಂತೆ ಹಲವು ಹುದ್ದೆಗಳನ್ನು ಏರಬಹುದಾಗಿದೆ. ಇದಕ್ಕೆ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮ ಉದಾಹರಣೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next