Advertisement

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

12:06 AM Jul 27, 2021 | Team Udayavani |

ಬೆಂಗಳೂರು: ಅವರ್‌ಬಿಟ್‌, ಇವರ್‌ಬಿಟ್‌ ಮತ್ಯಾರು ಎಂಬಂತೆ ಯಡಿಯೂರಪ್ಪ ನಿರ್ಗಮನದ ನಂತರ ಬಿಜೆಪಿ ಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ “ಕಾಂಬಿನೇಷನ್‌ ಕ್ಯಾಲ್ಕ್ಯುಲೇಷನ್‌’ ಶುರುವಾಗಿದೆ.

Advertisement

ಒಕ್ಕಲಿಗ‌, ಲಿಂಗಾಯಿತ ಪಂಚಮಸಾಲಿ ಅಥವಾ ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಎಂಬ ಮಾತುಗಳು ಮೇಲ್ನೋಟಕ್ಕೆ ಕೇಳಿಬರುತ್ತಿದ್ದರೂ ಬಿಜೆಪಿಯು ಆಂತರಿಕವಾಗಿ ಸಿಎಂ-ಡಿಸಿಎಂ ಹುದ್ದೆ ವಿಚಾರದಲ್ಲಿ ಲಾಭ-ನಷ್ಟದ ಆಳಕ್ಕಿಳಿದಿದೆ. ಒಕ್ಕಲಿಗ, ಲಿಂಗಾಯಿತ ಜತೆಗೆ ಹಿಂದುಳಿದ ಹಾಗೂ ದಲಿತ ಸಮುದಾಯವನ್ನೂ ಒಳಗೊಂಡಂತೆ ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸಿ 2023ರ ವಿಧಾನಸಭೆಯ “ಟಾರ್ಗೆಟ್‌’ನಡಿ ಹೊಸ ಸಂಪುಟ ರಚನೆಯ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನ ಬದಲಾಗುತ್ತಿರು ವುದರಿಂದ ಸಮುದಾಯವಾರು ಪ್ರಾತಿನಿಧ್ಯ ಲೆಕ್ಕಾಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವೂ ಬದಲಾಗಲಿದೆ ಎಂದೂ ಹೇಳಲಾಗುತ್ತಿದೆ. ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಲಿಂಗಾಯತರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕಾಗಬಹುದು. ಆಗ, ಸಹಜವಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೂ ಆಕಾಂಕ್ಷಿಯಾಗಬಹುದು.

ಬಿಎಸ್‌ವೈ ಸಹಕಾರವೂ ಮುಖ್ಯ: ಇಷ್ಟೆಲ್ಲ ಲೆಕ್ಕಾಚಾರಗಳ ನಡುವೆಯೂ ಹೊಸ ಮುಖ್ಯಮಂತ್ರಿ ಹಾಗೂ ಸಂಪುಟಕ್ಕೆ ಯಡಿಯೂರಪ್ಪ ಅವರ ಸಹಕಾರವೂ ಮುಖ್ಯ. ಪುತ್ರ ವಿಜಯೇಂದ್ರ  ಉಪ ಮುಖ್ಯಮಂತ್ರಿ ಆಗಬೇಕು ಎಂಬುದು ಅವರ ಆಸೆ. ಸದ್ಯಕ್ಕೆ ಸಚಿವ ಸ್ಥಾನವಾದರೂ ಕೊಟ್ಟರೆ ಸರ್ಕಾರ ಸುಗಮವಾಗಿ ನಡೆಯಬಹುದು. ಪಕ್ಷ ಅಥವಾ ಸರ್ಕಾರದಲ್ಲಿ ವಿಜಯೇಂದ್ರ ಅವರಿಗೆ ಪ್ರಮುಖ ಅಧಿಕಾರ ಕೊಡದಿದ್ದರೆ ಸರ್ಕಾರ ಅವಧಿ ಪೂರೈಸುವುದು ಕಷ್ಟವೇ ಆಗಬಹುದು. ಜತೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಂದವರಿಗೆ ಸಿಗುವ ಸ್ಥಾನಮಾನ ಮತ್ತು ಆದ್ಯತೆ ಮೇಲೆ ಸರ್ಕಾರದ ಭವಿಷ್ಯವೂ ನಿಲ್ಲಲಿದೆ ಎಂಬ ವಿಶ್ಲೇಷಣೆಗಳೂ ಇವೆ.

ಹಿರಿಯರಿಗೆ ಕೊಕ್‌?: ಈ ಮಧ್ಯೆ, ಬಿಜೆಪಿ ಈಹಿಂದೆ ಅಧಿಕಾರದಲ್ಲಿದ್ದಾಗಲೂ ಸಚಿವರಾಗಿದ್ದ ಹಿರಿಯರನ್ನು ಕೈ ಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು ಎಂಬ ಹೊಸದೊಂದು ಚಿಂತನೆಯೂ ಇದ್ದು ಹಾಗಾದಲ್ಲಿ ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌, ಕೆ.ಎಸ್‌.  ಈಶ್ವರಪ್ಪ, ಸುರೇಶ್‌ಕುಮಾರ್‌, ಗೋವಿಂದ ಕಾರಜೋಳ ಅವರು ಸಂಪುಟ ಸೇರುವುದು ಅನುಮಾನವಾಗಬಹುದು. ಪ್ರೀತಂಗೌಡ, ಅರವಿಂದ ಬೆಲ್ಲದ್‌, ಪಿ.ರಾಜೀವ್‌, ಸುನಿಲ್‌ಕುಮಾರ್‌ ಸೇರಿ ಯುವಕರಿಗೆ ಹೆಚ್ಚು ಅವಕಾಶ ಸಿಗಬಹುದು.

ಲಿಂಗಾಯತರು :

Advertisement

ಲಿಂಗಾಯತ ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಮುರುಗೇಶ್‌ ನಿರಾಣಿ ಹಾಗೂ ಅರವಿಂದ ಬೆಲ್ಲದ್‌, ಬಸನಗೌಡ ಪಾಟೀಲ ಯತ್ನಾಳ್‌ ರೇಸ್‌ಗೆ ಬರಲಿ ದ್ದಾರೆ. ಆಗ ಉಪ ಮುಖ್ಯಮಂತ್ರಿ ಸ್ಥಾನ ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಲಿಂಗಾಯಿತರಿಗೆ ಕೊಡುವ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಆಗ, ಡಾ.ಸಿ.ಎನ್‌. ಅಶ್ವತ್ಥನಾರಾಯಣ/ಆರ್‌.ಅಶೋಕ್‌, ಬಸವರಾಜ ಬೊಮ್ಮಾಯಿ, ಕೆ.ಎಸ್‌. ಈಶ್ವರಪ್ಪ, ಸುನಿಲ್‌ಕುಮಾರ್‌/ಕೋಟಾ ಶ್ರೀನಿವಾಸಪೂಜಾರಿ, ಅರವಿಂದ ಲಿಂಬಾವಳಿ, ಪಿ.ರಾಜೀವ್‌, ಶ್ರೀರಾಮುಲು ಅವರಿಗೆ ಅವಕಾಶ ಸಿಗಬಹುದು.

ಒಕ್ಕಲಿಗರು:

ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಸಿ.ಟಿ.ರವಿ ರೇಸ್‌ಗೆ ಬರಲಿದ್ದು, ಆಗ ಇಬ್ಬರು ಲಿಂಗಾಯಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕಾ ಗಬಹುದು. ಆಗ, ಮುರುಗೇಶ್‌ ನಿರಾಣಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ  ಅವರಿಗೆ ಅವಕಾಶ ದೊರೆಯಬಹುದು. ಜತೆಗೆ,  ದಲಿತ ಸಮುದಾಯದಿಂದ ಅರವಿಂದ ಲಿಂಬಾವಳಿ, ಶ್ರೀರಾಮುಲು, ಪಿ.ರಾಜೀವ್‌, ಹಿಂದುಳಿದ ವರ್ಗದಿಂದ ಸುನಿಲ್‌ಕುಮಾರ್‌ಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

ಬ್ರಾಹ್ಮಣರು :

ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಎಂದಾದರೆ ಬಿ.ಎಲ್‌.ಸಂತೋಷ್‌, ಪ್ರಹ್ಲಾದ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ ರೇಸ್‌ಗೆ ಬರಲಿದ್ದು, ಉಪ ಮುಖ್ಯಮಂತ್ರಿ ಸ್ಥಾನ ಆಗಲೂ ಲಿಂಗಾಯಿತ, ಒಕ್ಕಲಿಗ, ಹಿಂದುಳಿದ ಹಾಗೂ ದಲಿತ ಸಮುದಾಯಕ್ಕೆ ಕೊಡಬೇಕಾಗಿ ಬರಬಹುದು. ಆಗ, ಡಾ.ಸಿ. ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಕೆ.ಎಸ್‌. ಈಶ್ವರಪ್ಪ, ಕೋಟಾ ಶ್ರೀನಿವಾಸಪೂಜಾರಿ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಶ್ರೀರಾಮುಲು ಅವರ ಹೆಸರು ಪರಿಗಣನೆಗೆ ಬರಬಹುದು ಎಂಬ ಮಾತುಗಳು ಇವೆ.

ದಲಿತರು :

ರಾಜ್ಯದಲ್ಲಿ ಕಾಂಗ್ರೆಸ್‌ಗೆ ರಾಜಕೀಯವಾಗಿ ಆಘಾತ ನೀಡಲು ದಲಿತ ಸಮು ದಾಯಕ್ಕೆ ಮುಖ್ಯ ಮಂತ್ರಿ ಪಟ್ಟ ಕೊಡುವ ಯೋಚ ನೆಯೂ ಬಿಜೆಪಿ ಮಾಡಬಹುದು. ಆಗ, ಗೋವಿಂದ ಕಾರಜೋಳ ಹೆಸರು ಮುಂಚೂಣಿಗೆ ಬರಲಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಮುರುಗೇಶ್‌ ನಿರಾಣಿ, ಬಸವರಾಜ ಬೊಮ್ಮಾಯಿ, ಕೆ.ಎಸ್‌. ಈಶ್ವರಪ್ಪ ಸೇರಿ ಹಿರಿಯರಿಗೆ ಅವಕಾಶ ಸಿಗಬಹುದು.

 

-ಎಸ್‌. ಲಕ್ಷ್ಮಿನಾರಾಯಣ

 

Advertisement

Udayavani is now on Telegram. Click here to join our channel and stay updated with the latest news.

Next