ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಪುತ್ರ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಟಿಕೆಟ್ ನೀಡದ ಕಾರಣಕ್ಕೆ ಆಕ್ರೋಶಗೊಂದು ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಸಮರಕ್ಕಿಳಿದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕಣದಿಂದ ಹಿಂದೆ ಸರಿಯದ ಕಾರಣ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾಮಪತ್ರ ವಾಪಸ್ ಪಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಯಾರೋಬ್ಬರ ಮನವಿಗೂ ಈಶ್ವರಪ್ಪ ಅವರು ಜಗ್ಗಲೇ ಇಲ್ಲ.
ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ನೀಡಿದ್ದು, ”ಕೈ ಕಟ್ಟಿಕೊಂಡ ರೈತ ಮತ್ತು ಎರಡು ಕಬ್ಬುಗಳು” ಇರುವ ಚಿಹ್ನೆಯನ್ನು ನೀಡಲಾಗಿದೆ.
ನೇಹಾ ನಿವಾಸಕ್ಕೆ ಭೇಟಿ
ಸೋಮವಾರ ಹತ್ಯೆಗೀಡಾದ ನೇಹಾ ಹಿರೇಮಠ್ ಅವರ ಹುಬ್ಬಳ್ಳಿ ನಿವಾಸಕ್ಕೆ ಭೇಟಿಕೊಟ್ಟು, ತಂದೆ-ತಾಯಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರು. ರಾಜ್ಯ ಸರ್ಕಾರ ನೇಹಾ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದರು. ತನಿಖೆಯನ್ನು ಸಿಐಡಿಗೆ ವಹಿಸಿದರೆ ಪರಿಹಾರ ಸಿಗಲ್ಲ. ಅದನ್ನು ತಕ್ಷಣ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ನೇಹಾ ಹತ್ಯೆಯ ಬಳಿಕ ಹಿಂದೂ ಸಮಾಜ ಇಷ್ಟೊಂದು ಜಾಗೃತಗೊಳ್ಳುತ್ತದೆ ಎಂಬ ಕಲ್ಪನೆ ಸರ್ಕಾರಕ್ಕೆಇರಲಿಲ್ಲ. ನೇಹಾ ಹತ್ಯೆಯಾದ ಐದು ದಿನಗಳ ಬಳಿಕ ಪ್ರಕರಣ ಸಿಐಡಿಗೆ ವಹಿಸಿದೆ. ಪಾಕಿಸ್ಥಾನದಲ್ಲಿ ಹಿಂದೂ ಮಹಿಳೆಯರ ಕೊಲೆ ಆಗುತ್ತಿದೆ ಎನ್ನುವುದು ಕೇಳಿದ್ದೇವೆ. ಆದರೆ ಅದರ ಮುಂದುವರೆದ ಭಾಗ ರಾಜ್ಯದಲ್ಲಿ ನಡೆಯುತ್ತಿದೆ. ಹಿಂದೂ ಸಮಾಜ ಘಟನೆ ಖಂಡಿಸುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ ಗೌರವ ತರುವಂತದ್ದಲ್ಲ. ಸರ್ಕಾರದ ಸಚಿವರು ಎನ್ ಕೌಂಟರ್ ಮಾಡುವ ಕಾನೂನು ತರುತ್ತೇವೆ ಎಂದು ಹೇಳಿಕೆ ಕೊಟ್ಟರೆ ಸಾಲದು. ಕಾನೂನು ತರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸರ್ಕಾರ, ಸಿಎಂ ಮೇಲೆ ಒತ್ತಡ ಹೇರಬೇಕು ಎಂದರು.