ಬೆಂಗಳೂರು: ರಾಜ್ಯ ಸರಕಾರವನ್ನು ಕಟ್ಟಿಹಾಕಲು ಜೆಡಿಎಸ್ ಸಹಕಾರದ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದ್ದು, ಅಧಿವೇಶನ ನಡೆಯುವ ಅಷ್ಟೂ ದಿನಗಳು ಶಾಸಕರು ಹಾಜರಿರಬೇಕು ಎಂದು ಪ್ರಮುಖ ನಾಯಕರು ಕರೆ ನೀಡಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಜರಗಿದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿದ್ದು, ರಾಜ್ಯ ಸರಕಾರದ ವಿರುದ್ಧ ಯಾವ್ಯಾವ ವಿಚಾರಗಳನ್ನು ಇಟ್ಟುಕೊಂಡು ಹೋರಾಡಬೇಕು ಎಂಬ ಚರ್ಚೆಗಳಾಗಿವೆ.
ಪ್ರಮುಖವಾಗಿ ಶಾಸಕರು ಸಕಾಲಕ್ಕೆ ಆಗಮಿಸಬೇಕು, ಯಾರೂ ಗೈರುಹಾಜರಾಗ ಬಾರದು, ಸಕ್ರಿಯವಾಗಿ ಪಾಲ್ಗೊಳ್ಳಬೇಕು, ವಿಷಯಗಳ ಆಧಾರದ ಮೇಲೆ ಚರ್ಚೆಯಲ್ಲಿ ಭಾಗಿಯಾಗಬೇಕು, ಸರಕಾರದ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು, ಜೆಡಿಎಸ್ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳೋಣ ಎಂಬ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ಕೇಂದ್ರ ಸರಕಾರದ ಸಮರ್ಥನೆ
ಲೋಕಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರ ಮಾಡುವ ಆರೋಪಗಳಿಗೆ ತಕ್ಕ ಉತ್ತರ ನೀಡಬೇಕು. ಅನುದಾನ ಹಂಚಿಕೆ ವಿಚಾರದಲ್ಲಿ ದಿಲ್ಲಿಯಲ್ಲಿ ಪ್ರತಿಭಟಿಸಿ, ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹೊರಟಿರುವ ಕಾಂಗ್ರೆಸ್ ತಂತ್ರವನ್ನು ಮಣಿಸುವ ರೀತಿಯಲ್ಲಿ ಅಂಕಿಅಂಶಗಳ ಸಮೇತ ಸಮರ್ಥಿಸಿಕೊಳ್ಳಬೇಕು. ಇದರ ಜತೆಗೆ ರಾಜ್ಯ ಸರಕಾರ ಎಲ್ಲೆಲ್ಲಿ ವಿಫಲವಾಗಿದೆ ಎಂಬುದನ್ನು ಹೆಚ್ಚು ಪ್ರಸ್ತಾವಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು. ಲೋಕಸಭಾ ಚುನಾವಣೆ ಪ್ರಭಾರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ರಾಧಾಮೋಹನ ದಾಸ್ ಅಗರ್ವಾಲ್ ಉಪಸ್ಥಿತರಿದ್ದರು.