ಮಂಡ್ಯ: ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ತಮ್ಮ ಬಗ್ಗೆ ವೀಡಿಯೋಗಳನ್ನು ಪ್ರದರ್ಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಅದಕ್ಕೆ ನಿನ್ನನ್ನು ಸಿಡಿ ಶಿವು’ ಎನ್ನುವುದು, ನಿನ್ನ ಹಳೇ ಹುಟ್ಟು ಚಾಳಿ ಹೋಗುತ್ತದೆಯೇ?, ಸಿಡಿ, ವೀಡಿಯೋ ತೋರಿಸುವುದೇ ನಿನ್ನ ಕೆಲಸ ಎಂದು ಕಿಡಿಕಾರಿದರು.
ಮೈಸೂರು ಚಲೋ ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದ ಜೆ.ಸಿ.ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ನನಗೆ ಬಹಳಷ್ಟು ಜನರು ಕೊಚ್ಚೆಗಳ ಬಗ್ಗೆ ಮಾತಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ. ನಾನು ಮಾತನಾಡಬಾರದು ಎಂದು ಕೊಂಡಿದ್ದೆ. ಮಂಡ್ಯದಲ್ಲಿ ಅವರು ಒಂದು ವೀಡಿಯೋ ಪ್ಲೇ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಸಿಡಿ ಶಿವು’ ಎಂದು ಕರೆದಿದ್ದೆ. ಅವರ ಡಿವಿಡಿ ತೋರಿಸುವ ಚಾಳಿ ಎಲ್ಲಿ ಹೋಗುತ್ತದೆ ಹೇಳಿ, ಅವರು ಇನ್ನೂ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದರು.
ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ. ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಬಗ್ಗೆ ಏನೆಲ್ಲ ಮಾತನಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂ ಧಿ ಅವರ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ? ಎಂದು ತಿರುಗೇಟು ನೀಡಿದರು.
ಇಬ್ಬಗೆಯ ನೀತಿ
ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದಿಲ್ಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ. ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ.
ಆ ಸಮಯದಲ್ಲಿ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ. ಅವರು ಯಾಕೆ ದೇವೇಗೌಡರಿಗೆ ದನಿಗೂಡಿಸಲ್ಲ?. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಸೇರಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ ಎಂದು ಆರೋಪಿಸಿದರು.