ಬೆಳಗಾವಿ: ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು
ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಹುದಲಿ ಗ್ರಾಮದಲ್ಲಿ ಸೋಮವಾರ ಗ್ರಾಮದೇವಿ ಜಾತ್ರಾ ಅಂಗವಾಗಿ ಚರಂಡಿ, ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಹಾಗೂ ಸುಮಾರು 5 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ರಾಜ್ಯಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಕಾರ್ಯ ಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಜನರಿಗೆ ಯಾವುದೇ ಕೆಲಸಗಳು ಆಗಿಲ್ಲ. ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ. ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಪಕ್ಷದವರು ಸಹಿಸಿಕೊಳ್ಳುತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಯಮಕನಮರಡಿ ಹಾಗೂ ಹುದಲಿ ಗ್ರಾಮಕ್ಕೆ ಅಭಿವೃದ್ಧಿ ಕೆಲಸ ಮಾಡುವುದು ಹೊಸದೆನಲ್ಲ. ಗ್ರಾಮದಲ್ಲಿ ಯಾವಾಗ ಸಮಸ್ಯೆ ಇದೆ ಎಂದು ಹೇಳಿದಾಗಲೆಲ್ಲ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಇರುವದರಿಂದ ಹೆಚ್ಚೆಚ್ಚು ಅನುದಾನ ತರಲಾಗಿದೆ. ಸುಮಾರು 15 ವರ್ಷಗಳಲ್ಲಿ ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ ಶಾಲೆಗಳನ್ನು ಪ್ರಾರಂಭ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.