ಬೆಂಗಳೂರು:” ಕೈಮುಗಿಯುತ್ತೇನೆ. ಬಿಜೆಪಿ ಜತೆಗಿನ ಮೈತ್ರಿ ಪ್ರಸ್ತಾಪವನ್ನು ಮತ್ತೂಮ್ಮೆ ಪರಿಶೀಲಿಸಿ’
– ಹೀಗೆಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾಜಿ ಪ್ರಧಾನಿ ದೇವೇಗೌಡರಿಗೆ ಭಾನುವಾರ ಮನವಿ ಮಾಡಿದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ” ದೇವೇಗೌಡರು ತಪ್ಪು ಮಾಡಿದ್ದಾರೆ ಎಂಬುದು ನನಗೆ ನೋವಾಗಿಲ್ಲ. ಅದನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಇರಬೇಕು. ಅದನ್ನು ನಾನು ಬಯಸುತ್ತಿದ್ದೇನೆ ಅಷ್ಟೇ’ ಎಂದು ಹೇಳಿದ್ದಾರೆ.
“ನೂರಕ್ಕೆ ನೂರರಷ್ಟು ನಾನು ಜೆಡಿಎಸ್‌ನಲ್ಲಿದ್ದೇನೆ, ನಾನೇ ಜೆಡಿಎಸ್ ಅಧ್ಯಕ್ಷ’ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್‌ನ ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಗೆ ಇನ್ನೂ ಸಮಯವಿದೆ. ಮಾತನಾಡೋಣ ಎಂದು ಅವರಿಗೆಲ್ಲಾ ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಜತೆಗೆ ವ್ಯಕ್ತಿಗತವಾಗಿ ಭಿನ್ನಾಭಿಪ್ರಾಯಗಳಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ಇಬ್ಬರಿಗೂ ಗೌರವ ಕೊಡುತ್ತೇವೆ. ಆದರೆ, ಸೈದ್ಧಾಂತಿಕವಾಗಿ ವಿರೋಧವಿದೆ ಎಂದರು.
ಕೊಳಿಮೊಟ್ಟೆಯೇ ?: ರಾಜ್ಯ ಸಮಿತಿ ವಿಸರ್ಜಿಸಲು ಅದೇನು ಕೋಳಿ ಮೊಟ್ಟೆಯೇ? ಒಡೆದು ಆಮ್ಲೆಟ್ ಮಾಡಲು. ಚುನಾವಣೆ ಮೂಲಕ ಆಯ್ಕೆ ಆಗಿರುವ ಸಮಿತಿ ಅದು. ಚುನಾವಣಾ ಆಯೋಗದಲ್ಲಿ ನೋಂದಣಿ ಆಗಿರುವ ಪಕ್ಷವಿದು. ನನ್ನಿಚ್ಛೆ ಪ್ರಕಾರ ಪಕ್ಷ ನಡೆಸಲು ಆಗುವುದಿಲ್ಲ. ಕೋರ್ ಕಮಿಟಿ ದೇವೇಗೌಡರು ಮಾಡಿದ್ದಲ್ಲ. ನಾನು ಮಾಡಿದ್ದು. ಪದಾಧಿಕಾರಿಗಳನ್ನು ಮಾಡಿದ್ದೂ ನಾನು. ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷರಿಗೆ ಅಧಿಕಾರ, ಸಂವಿಧಾನಕ್ಕೆ ವಿರುದ್ಧವಾಗಿ ಅಧ್ಯಕ್ಷರು ನಡೆದರೆ ಮೂರರಲ್ಲಿ ಎರಡರಷ್ಟು ಬಹುಮತದ ಸದಸ್ಯರಿಂದ ನೋಟ್ ಕೊಡಬೇಕು. ಸಭೆ ಕರೆದು ಅಧ್ಯಕ್ಷರನ್ನು ತೆಗೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 26ರ ವರೆಗೆ ಪ್ರವಾಸದಲ್ಲಿ ಇರುವುದಾಗಿ ಹೇಳಿದ ಇಬ್ರಾಹಿಂ, . ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ. ಆದರೆ, ತೀರ್ಮಾನ ಕೈಗೊಳ್ಳಬೇಕಾದ ಕುಮಾರಸ್ವಾಮಿ ಮೇಲೆ ನನಗೆ ಭರವಸೆ ಇಲ್ಲ ಎಂದರು.
ಕೇರಳ ಜೆಡಿಎಸ್ ಘಟಕಕ್ಕೆ ಪ್ರತ್ಯೇಕ ಅಸ್ತಿತ್ವ
ತಿರುವನಂತಪುರ:ಬಿಜೆಪಿ ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪದ ವಿರುದ್ಧ ಸಿಡಿದು ನಿಂತಿರುವ ಜೆಡಿಎಸ್‌ನ ಕೇರಳ ಘಟಕ ಮುಂದಿನ ದಿನಗಳಲ್ಲಿ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲು ಮುಂದಾಗಿದೆ.
ಈ ಬಗ್ಗೆ ಭಾನುವಾರ ಮಾತನಾಡಿದ ಕೇರಳ ವಿದ್ಯುತ್ ಸಚಿವ ಮತ್ತು ಜೆಡಿಎಸ್ ಶಾಸಕ ಕೆ.ಕೃಷ್ಣನ್ ಕುಟ್ಟಿ, “ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಇದ್ದುಕೊಂಡು ಅಸ್ತಿತ್ವ ಕಾಪಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದೇವೆ. ಈ ಬಗ್ಗೆ ಬೆಂಗಳೂರಿಗೆ ತೆರಳಿ ಜೆಡಿಎಸ್ ವರಿಷ್ಠ ದೇವೇಗೌಡರಿಗೂ ಮಾಹಿತಿ ನೀಡಿದ್ದೇವೆ. ಮಾಜಿ ಪ್ರಧಾನಿ ನೇತೃತ್ವದ ಜೆಡಿಎಸ್ ಜತೆಗೆ ನಮ್ಮ ಸಂಪರ್ಕ ಇಲ್ಲ’ ಎಂದು ಅವರಿಗೆ ಮನವರಿಕೆ ಮಾಡಿದ್ದೇವೆ’ ಎಂದು ಹೇಳಿದ್ದಾರೆ.