Advertisement

BJP-JDS ದೋಸ್ತಿ ಸಂಧಾನ: ನಾಳೆ ಪಾದಯಾತ್ರೆ; ಎಚ್‌ಡಿಕೆ ಮುನಿಸು ತಣಿಸಿದ ಬಿಜೆಪಿ

11:27 AM Aug 02, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಮೈಸೂರು ಚಲೋ ನಿಗದಿಯಂತೆ ಶನಿವಾರ ಆರಂಭ ವಾಗಲಿದ್ದು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಹಿತ ಎಲ್ಲ ನಾಯಕರೂ ಪಾಲ್ಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮೈತ್ರಿಯಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

Advertisement

ಪಾದಯಾತ್ರೆಯಿಂದ ಹೆಜ್ಜೆ ಹಿಂದಿರಿಸಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದು, ಶನಿವಾರ ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಕೆಂಗೇರಿ ಸಮೀಪದ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ನೆರ ವೇರಿಸಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆ. 10ರಂದು ಮೈಸೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.

ಪ್ರೀತಂಗೌಡ ಹೊರಗಿಡಲು ಷರತ್ತು
ಗುರುವಾರ(ಆ.01) ಹೊಸದಿಲ್ಲಿಯಲ್ಲಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ನಾಯಕರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಸ್ತೃತ ಚರ್ಚೆ ನಡೆಸಿ ಜಂಟಿ ಪಾದಯಾತ್ರೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರೀತಂಗೌಡರನ್ನು ಪಾದಯಾತ್ರೆಯಿಂದ ಹೊರಗಿಡಲು ಜೆಡಿಎಸ್‌ ಷರತ್ತು ವಿಧಿಸಿದ್ದು, ಇದಕ್ಕೆ ಬಿಜೆಪಿ ಸಮ್ಮತಿಸಿದೆ.

ಮೈಸೂರಿನಲ್ಲಿ ಬೃಹತ್‌ ಸಮಾವೇಶ
ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌, ಮೈಸೂರಿನಲ್ಲಿ ಸಿಎಂ ಪತ್ನಿಗೆ ಬೆಲೆಬಾಳುವ 14 ನಿವೇಶನ ಮಂಜೂರಾಗಿದ್ದು, ಇದು 4 ಸಾವಿರ ಕೋಟಿ ರೂ.ಗಳ ಹಗರಣ. ಅಲ್ಲದೆ ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಣ ದುರುಪಯೋಗ ಆಗಿದ್ದು, ಆಂಧ್ರದ ಚುನಾವಣೆಗೆ ಬಳಸಲಾಗಿದೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಜನಾಕ್ರೋಶವಿದೆ. ಅದಕ್ಕೆ ನಾವು ಧ್ವನಿಗೂಡಿಸುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್‌ ಸಹಿತ ಎನ್‌ಡಿಎ ಆ. 3ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ. ಅಲ್ಲಿ ಅತಿದೊಡ್ಡ ಸಮಾವೇಶ ನಡೆಸಲಿದ್ದೇವೆ ಎಂದರು.

Advertisement

ಎಲ್ಲವೂ ಬಗೆಹರಿದಿದೆ: ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಕರ್ನಾಟಕ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣವನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುವ ಪರಮಾವಧಿ ತಲುಪಿದೆ. ಶನಿವಾರ ಎನ್‌ಡಿಎ ಪಾದಯಾತ್ರೆ ಪ್ರಾರಂಭವಾಗಲಿದೆ. ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಿಗೆ ಪಾದಯಾತ್ರೆ ನಡೆಸುತ್ತೇವೆ. ಸಂವಹನದ ಕೊರತೆಯನ್ನು ನಾನು, ವಿಜಯೇಂದ್ರ, ರಾಧಾಮೋಹನ್‌ ದಾಸ್‌ ಮಾತುಕತೆಯ ಮೂಲಕ ಸರಿಪಡಿಸಿದ್ದೇವೆ. ಎಲ್ಲವೂ ಬಗೆಹರಿದಿದೆ. ನಿಗದಿಯಂತೆ ಎರಡೂ ಪಕ್ಷಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. 7 ದಿನಗಳ ಪಾದಯಾತ್ರೆಯಲ್ಲಿ ಎನ್‌ಡಿಎ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ ಎಂದು ಪುನರುತ್ಛರಿಸಿದರು.

ಬಿಎಸ್‌ವೈ, ಎಚ್‌ಡಿಕೆ ಅವರಿಂದಲೇ ಚಾಲನೆ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಚರ್ಚೆ ಆಗುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ರೂ. ದೋಚಿದ್ದಾರೆ. ಇದನ್ನು ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಸಿಎಂ ಕುಟುಂಬಕ್ಕೆ ಅಕ್ರಮವಾಗಿ ಬಂದಿರುವ 14 ನಿವೇಶನಗಳು ರಿಯಲ್‌ ಎಸ್ಟೇಟ್‌ ಹಾಗೂ ಹಿಂಬಾಲಕರ ಪಾಲಾಗಿದ್ದು, ಮುಡಾಕ್ಕೆ 4 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಇದೆಲ್ಲದರ ವಿರುದ್ಧ ಸದನದಲ್ಲಿ ಒಟ್ಟಿಗೆ ಹೋರಾಡಿದ ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದೇವೆ. ಅದರಂತೆ ಶನಿವಾರ ಬೆಳಗ್ಗೆ 8.30ಕ್ಕೆ ನೈಸ್‌ ರಸ್ತೆ ಜಂಕ್ಷನ್‌ನಿಂದ ಪಾದಯಾತ್ರೆ ಆರಂಭವಾಗಲಿದೆ. ಬಿಜೆಪಿ-ಜೆಡಿಎಸ್‌ ಶಾಸಕರು, ಸಂಸದರು, ಕಾರ್ಯಕರ್ತರು ಇರುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಸಹಿತ ಎಲ್ಲರೂ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಯಾತ್ರೆ ಸಂಘಟಿಸಿರುವುದು ಪಕ್ಷವೇ ವಿನಾ ವ್ಯಕ್ತಿಯಲ್ಲ
ಪಾದಯಾತ್ರೆಯನ್ನು ಎರಡೂ ಪಕ್ಷಗಳು ವಹಿಸಿಕೊಂಡು ಮಾಡಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ನಡೆಯಲಿದೆ. ಎರಡೂ ಪಕ್ಷಗಳ ಶಾಸಕರು, ಸಂಸದರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಮ್ಮದು ದೊಡ್ಡ ಪರಿವಾರ. ಸಣ್ಣ-ಪುಟ್ಟ ಸಮಸ್ಯೆ ಸಹಜ. ಯಾತ್ರೆಯನ್ನು ಕೈಗೊಳ್ಳುತ್ತಿರುವುದು ವ್ಯಕ್ತಿಯಲ್ಲ, ಪಕ್ಷ. ನಮ್ಮ ಪಕ್ಷದ ಸಂಘಟನೆಯಲ್ಲಿ ವ್ಯಕ್ತಿಯ ಮಹತ್ವಕ್ಕೆ ಒಂದು ಮಿತಿ ಎಂದಿರುತ್ತದೆ. ಅದು ಪ್ರೀತಂಗೌಡ ಇರಲಿ, ಯಾರೇ ಇರಲಿ. ಯಾವುದೇ ವ್ಯಕ್ತಿಗೆ ಅನಾದರ ತೋರುವುದಿಲ್ಲ. ಕಾಂಗ್ರೆಸ್‌ನ ಭ್ರಷ್ಟಾಚಾರ ಕೊನೆಗಾಣಿಸಲು ಎಲ್ಲರೂ ಬನ್ನಿ ಎಂಬುದೇ ನಮ್ಮ ಮನವಿ ಎಂದು ರಾಧಾಮೋಹನ್‌ ಅಗರ್‌ವಾಲ್‌ ಹೇಳಿದರು.

ರಾಜ್ಯ ಸರಕಾರ ಕಳೆದ 15 ತಿಂಗಳುಗಳಲ್ಲಿ ಕರ್ನಾಟಕವನ್ನು ಲೂಟಿ ಮಾಡಲು ಹೊರಟಿದೆ. 4 ಸಾವಿರ ಕೋಟಿ ರೂ.ಗಳ ಮುಡಾ ಹಗರಣದಲ್ಲಿ ಸಿಎಂ ಕುಟುಂಬದ ಹೆಸರಿದೆ. ವಾಲ್ಮೀಕಿ ನಿಗಮದಿಂದ ಕೋಟ್ಯಂತರ ರೂ. ವರ್ಗಾವಣೆಯಾಗಿದೆ. ಸಂವಿಧಾನವನ್ನು ರಕ್ಷಿಸಬೇಕಾದವರೇ ಭಕ್ಷಣೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರದ ಕೂಪ ಎಂಬುದು ಜನಮಾನಸದಲ್ಲಿದೆ. ಇದಕ್ಕೆ ಧ್ವನಿಯಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.
– ಆರ್‌. ಅಶೋಕ್‌,
ವಿಧಾನಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next