Advertisement

BJP-JDS Convention: ಸಿಎಂ ಸಿದ್ದರಾಮಯ್ಯರನ್ನು ಮನೆಗೆ ಕಳಿಸೊವರೆಗೂ ಹೋರಾಟ : ಬಿಎಸ್‌ವೈ

08:46 PM Aug 10, 2024 | Team Udayavani |

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್‌  ಆಡಳಿತದಿಂದ ಜನರು ಬೇಸತ್ತಿದ್ದು,  ಸಿಎಂ ಸಿದ್ದರಾಮಯ್ಯನವರೇ ವಿಧಾನಸಭೆ ವಿಸರ್ಜಿಸಿ, ಹೊಸ ಚುನಾವಣೆ ಎದುರಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.

Advertisement

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ-ಜೆಡಿಎಸ್‌ ಮೈತ್ರಿ ಹಮ್ಮಿಕೊಂಡಿದ್ದ “ಮೈಸೂರು ಚಲೋ ಯಾತ್ರೆ” ಸಮಾರೋಪದಲ್ಲಿ ಕಾಂಗ್ರೆಸ್‌ನ ಹಗರಣಗಳ ಕುರಿತು ಆರೋಪಿಸಿರುವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ಸ್ಪಷ್ಟ ಬಹುಮತ ಕೊಟ್ಟರೂ ಸಿಎಂ, ಡಿಸಿಎಂ ಆಡಳಿತದಿಂದ ರಾಜ್ಯದ ಜನರು ನಿರಾಶೆ ಹೊಂದಿದ್ದಾರೆ. ಕಳೆದ 14 ತಿಂಗಳುಗಳಿಂದ ರಾಜ್ಯ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯಗಳ ಮಾಡಿಲ್ಲ.  ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಾಯಕರು ರಾಜ್ಯದ ಖಜಾನೆಯ ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಟ ಸಿಎಂ, ಡಿಸಿಎಂ ಇರುವವರೆಗೂ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಗೆಲುವು ಸಾಧಿಸಲಿದೆ, ಕನ್ನಡಿಗರು ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ಸಿದ್ದರಾಗಿದ್ದಾರೆ ಎಂದು ವಾಗ್ದಾಳಿ  ನಡೆಸಿದರು.


ರಾಜಕೀಯದಿಂದ ನಿವೃತ್ತಿ ಇಲ್ಲ: 

ಶುಕ್ರವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತ, 82 ವರ್ಷದ ಯಡಿಯೂರಪ್ಪ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಸಮಾವೇಶದಲ್ಲಿ ಪ್ರತ್ಯುತ್ತರ ನೀಡಿದ ಬಿಎಸ್‌ವೈ, ಸಿಎಂ ಸಿದ್ದರಾಮಯ್ಯ  ಅಧಿಕಾರದಿಂದ ಕೆಳಗಿಳಿಯುವವರೆಗೂ ನಾನು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.  ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವ ಮಾತಿರಲಿ, ಕೊನೆ ಉಸಿರು ಇರುವವರೆಗೂ ರಾಜಕಾರಣದಲ್ಲಿ ಇದ್ದು ನಿಮ್ಮನ್ನು ಮನೆಗೆ ಕಳಿಸುವ ಕೆಲಸ ಮಾಡುತ್ತೇನೆ ಎಂದರು. ತಾಕತ್ತಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ. ಈಗಲೂ ಚುನಾವಣೆ ನಡೆದರೆ ಬಿಜೆಪಿ 130- 140 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ಸಿಎಂ ಸಿದ್ದರಾಮಯ್ಯ  ಮುಡಾದಿಂದ 14 ನಿವೇಶನ ತನ್ನದೇ ಕುಟುಂಬಕ್ಕೆ  ಹೇಗೆ ತೆಗೆದುಕೊಂಡಿದ್ದೀರಿ? ಪರಿಹಾರ ಕೊಟ್ಟರೆ ವಾಪಸ್‌ ಕೊಡುತ್ತೀನಿ ಎಂದು ಹೇಳುತ್ತಾರೆ. ಅದು ಹೇಗೆ ತಗೊಂಡಿದ್ದಿರಿ, ಯಾರಪ್ಪನ ದುಡ್ಡು ಪರಿಹಾರ ಕೊಡಕ್ಕೆ. ನಿಮ್ಮ ಮೈಯೆಲ್ಲಾ ಕಪ್ಪು ಚುಕ್ಕೆ ಇವೆ.  ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಿಮ್ಮ ಪಾಪದ ಕೊಡ ತುಂಬಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಾನು ಕಲ್ಲುಬಂಡೆ ಎಂದು ತಮ್ಮನ್ನೇ ತಾವೇ ಕರೆದುಕೊಳ್ಳುತ್ತಾರೆ. ವಿರೋಧ ಪಕ್ಷದವರನ್ನು ಹೇಯ್‌ ವಿಜಯೇಂದ್ರ, ಹೇಯ್‌ ಅಶೋಕ್‌ ಎಂದು ಏಕವಚನದಲ್ಲಿ ಲಘುವಾಗಿ ಮಾತನಾಡುತ್ತಾರೆ.  ಇನ್ನೊಬ್ಬರ ಕುರಿತು ಹಗುರವಾಗಿ ಮಾತನಾಡುವುದು ಬಿಟ್ಟು, ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದು ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next