Advertisement
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿ ಕೊಡುವ ಸಂಪ್ರದಾಯವನ್ನು ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈ ಬಿಡಲಾಗಿದೆ. ಇದರ ಬದಲಾಗಿ ಅಭ್ಯರ್ಥಿ ಯಾರೆಂಬುದನ್ನು ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿ ಅಂತಿಮಗೊಳಿಸುವ ಅಧಿಕಾರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನೀಡಲಾಗಿದೆ. ಹೀಗಾಗಿ ರಾಜ್ಯಸಭಾ ಟಿಕೆಟ್ ದಿಲ್ಲಿಯಲ್ಲೇ ಅಂತಿಮಗೊಳ್ಳುವುದು ಎಂಬುದಂತೂ ಸ್ಪಷ್ಟ. ಬಿಜೆಪಿ ಮೂಲಗಳ ಪ್ರಕಾರ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಬೇಕೋ, ಬೇಡವೋ ಎಂಬುದಕ್ಕಿಂತ ಮೊದಲ ಅಭ್ಯರ್ಥಿ ಯಾರೆಂಬುದೇ ಇನ್ನೂ ಬಗೆಹರಿದಿಲ್ಲ. ಹಾಲಿ ಸಚಿವ ರಾಜೀವ್ ಚಂದ್ರಶೇಖರ್ ಮುಂದುವರಿಯುವ ಸಾಧ್ಯತೆ ಇದೆ ಎಂಬುದು ಕೆಲವರ ವಾದವಾದರೂ ಇನ್ನೂ ಸ್ಪಷ್ಟತೆ ಇಲ್ಲ.
ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದ್ಯದಲ್ಲೇ ನಡೆಯುವ ಚುನಾವಣೆಗೆ ಮೂರು ಹೆಸರುಗಳನ್ನು ಈಗಾಗಲೇ ಕಳುಹಿಸಲಾಗಿದೆ. ಹಾಲಿ ಸದಸ್ಯ ಅ.ದೇವೇಗೌಡ, ವಿನೋದ್ ಕೆ.ಗೌಡ ಹಾಗೂ ಎ.ಎಚ್.ಆನಂದ ಅವರ ಹೆಸರನ್ನು ಕಳುಹಿಸಲಾಗಿದೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಉಳಿದ ಅಭ್ಯರ್ಥಿಗಳ ಬಗ್ಗೆ ಸದ್ಯದಲ್ಲೇ ರಾಜ್ಯ ಸಮಿತಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಿದೆ.