Advertisement

ಲೋಕಸಭಾ ಸಮರದಲ್ಲಿ ಮಾತ್ರ ಅರಳುವ ಕಮಲ

01:08 PM Mar 31, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಸ್ಥಳೀಯವಾಗಿ ನಡೆಯುವ ಯಾವುದೇ ಚುನಾವಣೆ ಇರಲಿ ಜಿಲ್ಲೆಯಲ್ಲಿ ಕಮಲದ ಆರ್ಭಟವೇ ಅಪರೂಪ. ಆದರೆ ಲೋಕಸಭಾ ಚುನಾವಣೆ ಬಂತು ಅಂದರೆ ಸಾಕು ಕಮಲ ಇಡೀ ಕ್ಷೇತ್ರದಲ್ಲಿ ಕೇಕೆ ಹಾಕುತ್ತದೆ. ಯಾವುದೇ ಪಕ್ಷದ ಪ್ರಭಾವಿ ಅಭ್ಯರ್ಥಿಗೆ ಪ್ರಬಲ ಎದುರಾಳಿಯಾಗಿ ಕಮಲ ನಿಲ್ಲುತ್ತದೆ. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಕಮಲ ಮುದುಡಿ ಹೋಗುತ್ತದೆ.

Advertisement

ನಿಬ್ಬೆರರಾಗುತ್ತಾರೆ: ಜಿಲ್ಲೆಯ ರಾಜಕೀಯ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಸಾಕು ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲದ ಕೈ ಚಳಕಕ್ಕೆ ಎಂತಹವರು ನಿಬ್ಬೆರರಾಗುತ್ತಾರೆ. ಆದರೆ ವಿಧಾನಸಭಾ ಚುನಾವಣೆಗೆ ಕಮಲದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬಹುತೇಕ ಕಡೆ ಠೇವಣಿ ಕೂಡ ಬರುವುದಿಲ್ಲ.

ಸದ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲೀಗ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಬಿಜೆಪಿಯೇ ಪ್ರಬಲ ಎದುರಾಳಿಯಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಲೋಕ, ವಿಧಾನಸಭೆ ಮತ ಗಳಿಕೆ ವ್ಯತ್ಯಾಸ: ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳನ್ನು ವಿಭಜಿಸಿ ನೋಡುವುದಾದರೆ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಟ ಸಾಯಿಕುಮಾರ್‌ಗೆ ಕೇವಲ 4,124 ಮತಗಳು ಬಂದು ಠೇವಣಿ ಕಳೆದುಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡರಿಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಬರೋಬ್ಬರಿ 22,909 ಮತ ಪಡೆದಿದ್ದಾರೆ. ಗೌರಿಬಿದನೂರು ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದ ಜೈಪಾಲರೆಡ್ಡಿಗೆ 34,503 ಮತಗಳು ಬಂದರೆ 2014 ರ ಲೋಕಸಭಾ ಚುನಾವಣೆಯಲ್ಲಿ ಕಮಲಕ್ಕೆ 41,374 ಮತಗಳು ಹರಿದು ಬಂದಿವೆ.

Advertisement

ಇನ್ನೂ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥಗೆ ಕೇವಲ 5,528 ಮತಗಳು ಬಂದಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ 36,625 ಮತಗಳು ಬಿದ್ದಿವೆ.

ಯಲಹಂಕ: ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,19,688 ಮತಗಳು ಬಂದರೆ, ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡರಿಗೆ 1,01,775 ಮತಗಳು ಬಿದ್ದಿವೆ.

ಹೊಸಕೋಟೆ: ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಪುತ್ರ ಶರತ್‌ ಬಚ್ಚೇಗೌಡ 90,833 ಮತ ಪಡೆದಿದ್ದರೆ ಅವರ ತಂದೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ 80,060 ಮತಗಳು ಬಂದಿದ್ದವು.

ದೇವನಹಳ್ಳಿ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಯಿಂದ ಸ್ಪರ್ಧಿಸಿದ್ದ ಎಕೆಪಿ ನಾಗೇಶ್‌ಗೆ ಕೇವಲ 9,799 ಮತಗಳು ಬಂದರೆ ಬಿ.ಎನ್‌.ಬಚ್ಚೇಗೌಡಗೆ ಲೋಕಸಭಾ ಚುನಾವಣೆಯಲ್ಲಿ 36,216 ಮತಗಳು ಬಿದ್ದಿವೆ.

ದೊಡ್ಡಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಕಮಲದಿಂದ ಸ್ಪರ್ಧಿಸಿದ್ದ ಜೆ.ನರಸಿಂಹಸ್ವಾಮಿಗೆ 27,585 ಮತ ಬಂದರೆ ಲೋಕಸಭಾ ಚುನಾವಣೆಯಲ್ಲಿ 54,055 ಮತಗಳು ಬಂದಿವೆ.

ನೆಲಮಂಗಲ: ವಿಧಾನಸಭಾ ಕ್ಷೇತ್ರದಲ್ಲಿ ಕಮಲದಿಂದ ಸ್ಪರ್ಧಿಸದಿದ್ದ ಎಂ.ವಿ.ನಾಗರಾಜ್‌ಗೆ 42,386 ಮತಗಳು ಬಂದರೆ ಲೋಕಸಭಾ ಚುನಾವಣೆಯಲ್ಲಿ 41,240 ಮತಗಳು ಹರಿದು ಬಂದಿವೆ. ಆದರೆ ಯಲಹಂಕ ಹಾಗೂ ಹೊಸಕೋಟೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ ವಿಧಾನಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತ ಪಡೆದಿರುವುದು ಎದ್ದು ಕಾಣುತ್ತಿದೆ.

ಕ್ಷೇತ್ರದಲ್ಲಿ ಪಕ್ಷಗಳ ಬಲಾಬಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಮಲದ ಏಕೈಕ ಶಾಸಕರು ಇದ್ದಾರೆ. ಉಳಿದಂತೆ 7 ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ, ಗೌರಿಬಿದನೂರು. ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ.

ದೇವನಹಳ್ಳಿ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸ್ಪರ್ಧೆಯಿಂದ ತ್ರೀಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಈ ಬಾರಿ ಕಾಂಗ್ರೆಸ್‌, ಬಿಜೆಪಿ ನಡುವೆಯೆ ನೇರ ಹಣಾಹಣಿ ನಡೆಯುತ್ತಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಬಲ ಇಲ್ಲ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಯಲಹಂಕ, ಹೊಸಕೋಟೆ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಹೊರತುಪಡಿಸಿದರೆ ಕ್ಷೇತ್ರದ ವ್ಯಾಪ್ತಿಗೆ ಬರುವ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ದೇವನಹಳ್ಳಿ, ದೊಡ್ಡಬಳ್ಳಾಪುರ ವಿಧಾನಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ತಾಪಂ, ಜಿಪಂಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ.

ಈ ಕ್ಷೇತ್ರಗಳಲ್ಲಿ ಬಿಜೆಪಿ ಅಸ್ತಿತ್ವವೇ ಅಪರೂಪ. ಆದರೆ ಪ್ರತಿ ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಮತ ಹರಿದು ಬರುತ್ತಿರುವುದು ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕೂಡ ಸಾಬೀತಾಗುತ್ತಿದೆ.

ಒಟ್ಟಾರೆ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಯ ರಾಷ್ಟ್ರೀಯ ವಿಚಾರಾಧಾರೆಗಳಿಗೆ ಮನಸೋತು ಬಿಜೆಪಿ ಬೆಂಬಲಿಸುತ್ತಿರುವುದು ಎದ್ದು ಕಾಣುತ್ತಿದ್ದರೂ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಕಮಲ ಅರಳದೇ ಪ್ರತಿ ಚುನಾವಣೆಯಲ್ಲಿ ಮುದುಡುತ್ತಾ ಬರುತ್ತಿದೆ.

ಲೋಕಸಭಾ ಚುನಾವಣೆಯಲ್ಲೂ ಯಶಸ್ವಿಗೆ ಹಿನ್ನಡೆ ಆಗುತ್ತಿದೆಯೆಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾತ್ರ ಕೇಳಿ ಬರುತ್ತಿದೆ. ಜೊತೆಗೆ ಬಿಜೆಪಿ ಅಭ್ಯರ್ಥಿಯಾಗುವವರು ಚುನಾವಣೆಯಲ್ಲಿ ಸಂದರ್ಭದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂಬುದು ಕ್ಷೇತ್ರದ ಸಾಮಾನ್ಯ ಮತದಾರರು ಹೇಳುತ್ತಾರೆ.

ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುತ್ತಾ?: ಕಳೆದ ಎರಡು, ಮೂರು ಲೋಕಸಭಾ ಚುನಾವಣೆಗಳಿಂದ ಜೆಡಿಎಸ್‌ ಪ್ರಾಬಲ್ಯ ಇದ್ದರೂ ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ದಡ ಮುಟ್ಟಲು ಹರಸಾಹಸ ಮಾಡುತ್ತಿದೆ. ಕಳೆದ ಬಾರಿ ಕೂಡ ಜೆಡಿಎಸ್‌ ಸ್ಪರ್ಧಿಸಿದ್ದರೂ ಬಿಜೆಪಿಯ ಬಚ್ಚೇಗೌಡ ಕೇವಲ 9520 ಮತಗಳ ಅಂತರದಿಂದ ಸೋತರು. ಆದರೆ ಈ ಬಾರಿ ಜೆಡಿಎಸ್‌ ಸ್ಪರ್ಧೆ ಇಲ್ಲದೇ ನೇರ ಸ್ಪರ್ಧೆ ಇರುವುದರಿಂದ ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಹೇಳಿಕೊಳ್ಳುತ್ತಿದ್ದಾರೆ.

ಸಂಸದ ಮೊಯ್ಲಿ ಕೂಡ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಆಗಿರುವುದರಿಂದ ಈ ಬಾರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ನನ್ನದು ಪಕ್ಕಾ ಎನ್ನುತ್ತಿದ್ದಾರೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದರೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸುತ್ತಾ ಬರುತ್ತಿರುವ ಬಿಜೆಪಿಗೆ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ.

ಬಿಜೆಪಿ ಮತ ಗಳಿಕೆ ಪ್ರಮಾಣ ಕ್ಷೇತ್ರವಾರು
ಕ್ಷೇತ್ರ ವಿಧಾನಸಭಾ ಚುನಾವಣೆ (2018) ಲೋಕಸಭಾ ಚುನಾವಣೆ(2014)
-ಗೌರಿಬಿದನೂರು 34,503 41,374
-ಬಾಗೇಪಲ್ಲಿ 4,124 22,909
-ಚಿಕ್ಕಬಳ್ಳಾಪುರ 5,528 36,625
-ದೇವನಹಳ್ಳಿ 9.799 36,216
-ದೊಡ್ಡಬಳ್ಳಾಪುರ 27,585 54,055
-ನೆಲಮಂಗಲ 42,386 41,240
-ಹೊಸಕೋಟೆ 90,883 80,060
-ಯಲಹಂಕ 1,19,688 1,01,775

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next