Advertisement

ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ: ನಳಿನ್‌ಕುಮಾರ್ ಕಟೀಲ್

08:49 PM May 11, 2022 | Team Udayavani |

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿದ ಅಡಿ ಚುನಾವಣಾ ಆಯೋಗವು ಕೂಡಲೇ ಚುನಾವಣೆಯನ್ನು ನಡೆಸಬೇಕಾಗಿದೆ. ಬಿಜೆಪಿ ಯಾವುದೇ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮತ್ತು ಪ್ರಧಾನಿಯವರಾದ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಒಬಿಸಿಗೆ ನ್ಯಾಯ ಕೊಡಲು ಆಯೋಗವನ್ನೂ ರಚಿಸಲಾಗಿದೆ ಎಂದರು. ಯಾವುದೇ ಚುನಾವಣೆಯಲ್ಲಿ ಒಬಿಸಿ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು.

ಒಬಿಸಿ ಮೀಸಲಾತಿ ಬಿಜೆಪಿಗೆ ತೊಡಕಾಗುವುದಿಲ್ಲ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸೇರಿ ಯಾವುದೇ ಚುನಾವಣೆಯನ್ನು ಎದುರಿಸಲು ಪರಿಪೂರ್ಣ ರೀತಿಯಲ್ಲಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಎಲ್ಲೆಲ್ಲಿ ಅಗತ್ಯವೋ ಅಲ್ಲಿ ಒಬಿಸಿ ಸಮುದಾಯಕ್ಕೆ ಶೇ 33ಕ್ಕಿಂತ ಹೆಚ್ಚು ಮೀಸಲಾತಿ ಕೊಟ್ಟು ಅವರಿಗೆ ಅವಕಾಶವನ್ನು ಬಿಜೆಪಿ ಕಲ್ಪಿಸಲಿದೆ ಎಂದರು.

ಈಗಾಗಲೇ ನಾವು ಮತಗಟ್ಟೆವರೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇವತ್ತು ನಮ್ಮಲ್ಲಿ ಅತ್ಯುತ್ತಮ ತಂಡವಿದೆ. ಪೇಜ್ ಕಮಿಟಿವರೆಗೆ ನಾವು ವಿಸ್ತಾರವನ್ನು ಮಾಡಿದ್ದೇವೆ. ಹಿಂದೆ ಗ್ರಾಮಕ್ಕೆ ಒಂದು ಸಮಿತಿ ಇತ್ತು. ಬಳಿಕ ಅದನ್ನು ಬೂತ್ ಸಮಿತಿಗೆ ವಿಸ್ತರಿಸಲಾಯಿತು. ಇದೀಗ ಅದನ್ನು ಪೇಜ್ ಕಮಿಟಿ ವರೆಗೆ ವಿಸ್ತರಿಸಲಾಗಿದೆ. ಒಂದು ಮತದಾರರ ಪಟ್ಟಿಯ ಒಂದು ಪುಟಕ್ಕೊಬ್ಬರು ಪ್ರಮುಖರನ್ನು ನೇಮಿಸಲಾಗಿದೆ. ಒಂದು ಪುಟಕ್ಕೆ ಆರು ಸದಸ್ಯರಿರುತ್ತಾರೆ ಎಂದರು.

ಇದಲ್ಲದೆ ಒಂದು ಬೂತ್‌ನಲ್ಲಿ ಒಬ್ಬರು ಎಸ್‌ಸಿ, ಒಬ್ಬರು ಎಸ್‌ಟಿ, ಒಬ್ಬರು ಮಹಿಳೆ, ಒಬ್ಬರು ಸಾಮಾನ್ಯ ವರ್ಗದವರು, ಒಬ್ಬರು ಒಬಿಸಿಯವರು ಸೇರಿ ಪಂಚರತ್ನ ಕಮಿಟಿಯನ್ನೂ ರಚಿಸಿದ್ದೇವೆ. ಹಾಗಾಗಿ ಪರಿಪೂರ್ಣ ರೀತಿಯಲ್ಲಿ ನಾವು ಸಿದ್ಧರಾಗಿದ್ದೇವೆ. ಬಿಜೆಪಿ ಮೂರು ತಂಡಗಳ ಸಂಘಟನಾತ್ಮಕ ಪ್ರವಾಸದಲ್ಲಿ ಪಕ್ಷದ ಪರವಾಗಿ ಅಲೆ ಇರುವುದು ವ್ಯಕ್ತವಾಗಿದೆ ಎಂದು ವಿವರ ನೀಡಿದರು.

Advertisement

ಯಾವುದೇ ಚುನಾವಣೆ ಬಂದರೂ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಗಳಿಸಲಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಪಕ್ಷ ನಮ್ಮದು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಮ್ಮ ಪಕ್ಷ ಬದ್ಧತೆ ತೋರಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅತಿ ಹೆಚ್ಚು ಯೋಜನೆಗಳನ್ನು ಹಿಂದುಳಿದ ವರ್ಗಗಳಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಬೊಮ್ಮಾಯಿ ಅವರ ಸರಕಾರದಲ್ಲೂ ಈ ವರ್ಗಗಳಿಗೆ ಅತಿ ಹೆಚ್ಚು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ಚುನಾವಣೆ ಆಯೋಗ ಮತದಾನದ ಪ್ರಕ್ರಿಯೆ ನಡೆಸಬೇಕಿದೆ. ಯಾವಾಗ ಚುನಾವಣೆ ನಡೆದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಿದೆ ಎಂದರು.

ಬಿಜೆಪಿಗೆ ಆಪರೇಷನ್ ಕಮಲದ ಅನಿವಾರ್ಯತೆ ಇಲ್ಲ. ಪಕ್ಷದ ತತ್ವ, ಸಿದ್ಧಾಂತ ನಂಬಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು. ಪಿಎಸ್‌ಐ ನೇಮಕ ಹಗರಣದ ತನಿಖೆಗೆ ಕೂಡಲೇ ನಮ್ಮ ಸರಕಾರ ಆದೇಶ ನೀಡಿದೆ. ಪಾರದರ್ಶಕವಾದ ತನಿಖೆ ಆಗುತ್ತಿದೆ. ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next