Advertisement
ಶನಿವಾರ ಕಾಡುಗೊಂಡನಹಳ್ಳಿ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಕಂಕಣ ತೊಟ್ಟಿದ್ದಾರೆ. ಸಂಸದ ಪ್ರತಾಪ್ ಸಿಂಹ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೊಸ ಕೆಲಸ ಕೊಟ್ಟಂತಿದೆ.
Related Articles
Advertisement
ಮರಣೋತ್ತರ ಸದಸ್ಯತ್ವ: “ಬಿಜೆಪಿ ನಾಯಕರು ಸಂತೋಷ್ ಕೊಲೆಯಲ್ಲಿ ರಾಜಕೀಯ ಮಾಡುತ್ತಾರೆ. ಅಸಲಿಗೆ ಸಂತೋಷ್ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ಪರೇಶ್ ಮೆಸ್ತಾ ಸಾವಲ್ಲೂ ಬಿಜೆಪಿಯವರು ಇದೇ ರೀತಿ ರಾಜಕೀಯ ಮಾಡಿದ್ದರು. “ಆತ ನಮ್ಮ ಪಕ್ಷದ ಕಾರ್ಯಕರ್ತ’ ಎನ್ನುವ ಮೂಲಕ ಶೋಭಾ ಕರಂದ್ಲಾಜೆ, ಕೊಲೆಯಾದವರಿಗೆಲ್ಲ ಮರಣೋತ್ತರ ಸದಸ್ಯತ್ವ ಕೊಡುತ್ತಿದ್ದಾರೆ,’ ಎಂದು ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು.
ದಾನಮ್ಮ ಸಾವು ಸಾವಲ್ಲವೇ?: ಚಿಕ್ಕಬಳ್ಳಾಪುರದ ಪರಿವರ್ತನಾ ರ್ಯಾಲಿಯಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುತ್ತಾರೆ. ಇಂತಹ ನಾಯಕರು ವಿರೋಧ ಪಕ್ಷದಲ್ಲಿ ಕೂರಲೂ ನಾಲಾಯಕ್. ಗೌರಿ ಲಂಕೇಶ್ ಮೃತಪಟ್ಟಾಗ ಯಡಿಯೂರಪ್ಪ ಸಮೇತ ಯಾರೂ ಹೋಗಲಿಲ್ಲ. ದಾನಮ್ಮ ಮತ್ತು ಧನ್ಯಶ್ರೀ ಸಾವಿಗೆ ಬೆಲೆ ಇಲ್ವಾ? ಅವರ ಸಾವಿನ ಕುರಿತು ಯಾಕೆ ಪ್ರತಿಭಟನೆ ಮಾಡಲಿಲ್ಲ. ಹರೀಶ್ ಪೂಜಾರಿ, ವಿನಾಯಕ್ ಬಾಳಿಗ ಕೊಲೆಗೆಲ್ಲ ಪ್ರತಿಭಟನೆ ಮಾಡಲ್ಲ. ಅವರನ್ನು ಕೊಲೆಗೈದವರು ಬಿಜೆಪಿ ಬೆಂಬಲಿಗರೇ. ಅದಕ್ಕೆ ಅವರ ಹತ್ಯೆ ಬಗ್ಗೆ ಮಾತನಾಡುವುದಿಲ್ಲ,’ ಎಂದು ಆರೋಪಿಸಿದರು.
ಅಪರಾಧ ಸಂಖ್ಯೆ ಕಡಿಮೆಯಾಗಿದೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ 20ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಅಲ್ಲದೇ 11 ಸಾವಿರ ಪೊಲೀಸ್ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಪೊಲೀಸ್ ಕಲ್ಯಾಣಕ್ಕಾಗಿ ಸರ್ಕಾರ 2 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಠಾಣೆಯಲ್ಲಿ ಹೋಮ: ನೂತನವಾಗಿ ಉದ್ಘಾಟನೆಗೊಂಡ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಉದ್ಘಾಟನೆಗೂ ಮೊದಲು ಹೋಮ ನಡೆಸಲಾಯಿತು. ಸಚಿವ ಕೆ.ಜೆ.ಜಾರ್ಜ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಜಿಪಿ ಎಂ.ನಂಜುಂಡಸ್ವಾಮಿ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್ ಯಾರು? ರಾಜ್ಯದ ಬಗ್ಗೆ ಅವರಿಗೇನು ಗೊತ್ತು. ಕಾಂಗ್ರೆಸ್ ಪಿಎಫ್ಐ, ಎಸ್‌ಡಿಪಿಐ ಸಂಘಟನೆ ಜತೆ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಬೆಜೆಪಿ ಸ್ಪಷ್ಟನೆ ನೀಡಲಿ. ಕಾಂಗ್ರೆಸ್ ಯಾವ ಪಕ್ಷದೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಪರೋಕ್ಷವಾಗಿ ಒವೈಸಿ ಜತೆ ನಿರಂತರ ಸಂಪರ್ಕದಲ್ಲಿದೆ.-ರಾಮಲಿಂಗಾರೆಡ್ಡಿ, ಗೃಹ ಸಚಿವ