Advertisement

ಬಿಜೆಪಿ ಈಗ ಕಲಬೆರಕೆ ಪಕ್ಷ: ಪ್ರಮೋದ ಮುತಾಲಿಕ

05:46 PM Nov 10, 2021 | Team Udayavani |

ಬಾಗಲಕೋಟೆ: ಬಿಜೆಪಿ ಇಂದು ಕಲಬೆರಕೆ ಪಕ್ಷವಾಗಿದೆ. ಬಿಜೆಪಿಯಲ್ಲಿ ಇಂದು ಶೇ.60ರಿಂದ 70ರಷ್ಟು ಜನ ಕಾಂಗ್ರೆಸ್‌-ಜೆಡಿಎಸ್‌ನಿಂದ ಬಂದಿದ್ದಾರೆ. ಕಮ್ಯುನಿಸ್ಟರೂ ಬಂದಿದ್ದಾರೆ. ಶೇ.30ರಿಂದ 40 ಮಾತ್ರ ಮೂಲ ಬಿಜೆಪಿಯವರಿದ್ದಾರೆ. ಹೀಗಾಗಿ ಬಿಜೆಪಿ ಕಲಬೆರಕೆ ಪಕ್ಷವಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಹಿಂದುತ್ವ ಇಲ್ಲ. ಅವರಿಗೆ ಬರೀ ಲೂಟಿ ಮಾಡಬೇಕು ಎಂಬುದೇ ಚಿಂತೆ. ಕಾಂಗ್ರೆಸ್‌ ನವರು ಈವರೆಗೆ ಭಯೋತ್ಪಾದಕರನ್ನೇ ಬೆಳೆಸಿದ್ದಾರೆ. ಅಂಥವರು ಇಂದು ಬಿಜೆಪಿಯಲ್ಲಿದ್ದಾರೆ. ಅವರಿಗೆ ಹಿಂದುತ್ವ, ಧರ್ಮ, ದೇಶ, ಸಂಸ್ಕೃತಿ, ಮಾನ-ಮರ್ಯಾದೆ ಏನೂ ಇಲ್ಲ. ಬಿಜೆಪಿ ಇಂದು ಮೂಲ ಬಿಜೆಪಿಯಾಗಿ ಉಳಿದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ ತಮ್ಮ ಕ್ಷೇತ್ರದಲ್ಲಿ 52 ಅಡಿ ಎತ್ತರದ ಏಸುಕ್ರಿಸ್ತನ ಪುತ್ಥಳಿ ಕೂರಿಸಲು ಹೊರಟಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಸೆಳೆಯಲು ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಜೆ ಹಳ್ಳಿ, ಕೆ.ಜೆ. ಹಳ್ಳಿ ಗಲಾಟೆಯಾದಾಗ ಇದೇ ಡಿ.ಕೆ. ಶಿವಕುಮಾರ, ನಾವೆಲ್ಲ ಬ್ರದರ್ ಆ್ಯಂಡ್‌ ಸಿಸ್ಟರ್ಸ್‌ ಅಂದಿದ್ದರು. ಶಿವಕುಮಾರ ಅವರೇ ದೇಶ ಮೊದಲು. ದೇಶ ಉಳಿದರೆ ನೀವು ಕೆಪಿಸಿಸಿ ಅಧ್ಯಕ್ಷರಾಗಿ ಉಳಿಯುತ್ತೀರಿ. ಇಲ್ಲದೇ ಹೋದರೆ ನೀವು ಇಟಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪಕ್ಷದವರಿಂದಲೇ ದೇವಸ್ಥಾನ ಒಡೆಯಲಾಗುತ್ತಿದೆ. ಇದು ಬಹಳ ಬೇಸರ ತರಿಸಿದೆ. ನಾವು ಈ ವಿಷಯದಲ್ಲಿ ಹೋರಾಟ ಮಾಡುತ್ತೇವೆ. ನಾವೇನು ಕೈಕಟ್ಟಿ ಕುಳಿತಿಲ್ಲ ಎಂಬುದು ಅಧಿಕಾರದಲ್ಲಿರುವವರು ತಿಳಿದುಕೊಳ್ಳಲಿ. ಸುಪ್ರೀಂಕೋರ್ಟ್‌ ಆದೇಶವೆಂದು ಹಿಂದೂ ದೇವಸ್ಥಾನ ಒಡೆದರು. ಮಸೀದಿಯಲ್ಲಿನ ಮೈಕ್‌ ತೆರವುಗೊಳಿಸಬೇಕೆಂದು ಕೂಡ ಸುಪ್ರೀಂಕೋರ್ಟ್‌ ಆದೇಶಿಸಿದೆ. ರಾಜ್ಯದಲ್ಲಿ ಈ ಆದೇಶ ಏಕೆ ಪಾಲನೆ ಮಾಡುತ್ತಿಲ್ಲ?. ಮಸೀದಿ ತೆರವುಗೊಳಿಸುವಂತೆ ನಾವು ಹೋರಾಟ ಮಾಡುತ್ತಿದ್ದೇವೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮತಾಂತರ ಕಾಯ್ದೆ ಜಾರಿಗೆ ಸಿಎಂ ಭೇಟಿ: ರಾಜ್ಯದ ನೂರಕ್ಕೂ ಹೆಚ್ಚು ಜನ ಮಠಾಧೀಶರೊಂದಿಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ನ.12ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ರಾಜ್ಯದ ಹಲವು ಮಠಾಧೀಶರು ಸೇರಿ ನಿಯೋಗದ ಮೂಲಕ ಸಿಎಂ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

Advertisement

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ ಮತಾಂತರ ವಿಷಯ ವಿಧಾನಸಭೆಯಲ್ಲಿ ಚರ್ಚೆಗೆ ತಂದಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ತಾಯಿಯೇ ಮತಾಂತರ ಆಗಿದ್ದರ ಬಗ್ಗೆ ವಿವರಿಸಿದ್ದರು. ಮತಾಂತರ ಮಾಡುತ್ತಿಲ್ಲವಾದರೆ ಹೆದರುವುದೇಕೆ?. ನಮ್ಮ ದೇಶದ ಶೇ.99 ಕ್ರಿಶ್ಚಿಯನ್ನರು ಮತಾಂತರ ಆದವರಿದ್ದಾರೆ. ಒತ್ತಾಯ, ಆಸೆ, ಆಮಿಷಗಳಿಂದ ಮತಾಂತರ ಆಗಿದ್ದಾರೆ. ಮತಾಂತರದ ಹಾವಳಿ ವಿಪರೀತವಾಗಿದೆ. ಲಂಬಾಣಿ ತಾಂಡಾಗಳಿಗೆ ಫಾದ್ರಿಗಳು ನುಗ್ಗುತ್ತಿದ್ದಾರೆ. ಅವರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಮತಾಂತರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್‌, ಶಾಲೆ-ಸಂಘ ಸಂಸ್ಥೆಗಳು ಕೊನೆಗೆ ಮತಾಂತರದಲ್ಲೇ ಮುಕ್ತಾಯವಾಗುತ್ತವೆ. ಶಿಕ್ಷಣ, ಆರೋಗ್ಯ ಸೇವೆ ಎಲ್ಲವೂ ಬೂಟಾಟಿಕೆ ಎಂದು ಆರೋಪಿಸಿದರು.

ಪುನೀತ್‌ಗೆ ಪದ್ಮಶ್ರೀ ಕೊಡಿ
ಈಚೆಗೆ ಅಗಲಿದ ಯುವ ನಟ ಪುನೀತ್‌ ರಾಜಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಅವರ ಸಾಮಾಜಿಕ ಸೇವೆ, ನಟನೆ ಅತ್ಯದ್ಭುತ. ರಾಜಕುಮಾರ್‌ ಅವರ ಮಗ ತದ್ರೂಪಿಯಾಗಿ ಯೋಗ್ಯವಾದ ನಟನೆ ಮಾಡುತ್ತಿದ್ದರು. ಅವರ ಪ್ರತಿಯೊಂದು ಸಿನೆಮಾದಲ್ಲಿ ಉತ್ತಮ ಸಂದೇಶ ಇರುತ್ತಿತ್ತು. ರಾಜ್ಯದಲ್ಲಿ ಗಣಿ ಲೂಟಿ ಆಗುತ್ತಿದ್ದಾಗ ಅದಕ್ಕೆ ಸಂಬಂಧಿಸಿದ ಸಿನೆಮಾ ತೆಗೆದಿದ್ದರು. ಯುವರತ್ನ ಮೂಲಕ ಕಾಲೇಜ್‌ನಲ್ಲಿ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದ ಸಂದೇಶ ಇತ್ತು. ಹೀಗಾಗಿ ಪ್ರಶಸ್ತಿ ಕೊಡುವುದರಲ್ಲಿ ತಪ್ಪಿಲ್ಲ. ನ.12ರಂದು ಅಪ್ಪು ಮನೆ ಮತ್ತು ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
ಪ್ರಮೋದ ಮುತಾಲಿಕ, ರಾಷ್ಟ್ರೀಯ ಅಧ್ಯಕ್ಷ, ಶ್ರೀರಾಮ ಸೇನೆ

Advertisement

Udayavani is now on Telegram. Click here to join our channel and stay updated with the latest news.

Next