ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಡಬಲ್ ಎಂಜಿನ್ ಸರಕಾರ ರೈತರಿಗೆ ಡಬಲ್ ಬೆಲೆ ಕೊಡುತ್ತೇವೆ ಎನ್ನುವುದನ್ನು ಬಹಿರಂಗವಾಗಿ ಹೇಳಲಿ, ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆರೋಪಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ಬೆಲೆ ಲೀಟರ್ ಗೆ 23, 24ರೂ. ಇದೆ. ಹಾಲಿನ ಬೆಲೆ 27, 28ರೂ. ಇದೆ. ರೈತರಿಗೆ ಯಾವ ಬೆಲೆ ಕೊಡುತ್ತಾರೆ ಎನ್ನುವುದನ್ನು ಹೇಳಬೇಕು. ಅವರು ಸಮಾವೇಶ ಮಾಡಲಿ ನಮ್ಮದು ಏನು ಅಭ್ಯಂತರವಿಲ್ಲ. ಮಹಾದಾಯಿ ಯೋಜನೆಗೆ ಹಿಂದೊಮ್ಮೆ ಪೂಜೆ ಮಾಡಿದ್ದರು. ಈಗ ಮತ್ತೆ ಮಾಡುತ್ತಿದ್ದಾರೆ. ಅದಕ್ಕೆ ನಮ್ಮದು ಏನು ಅಭ್ಯಂತರವಿಲ್ಲ. ಆದರೆ ಬಿಜೆಪಿಯವರು ಬರೀ ಚಾಕಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ. ನಿಮ್ಮದು ಟ್ರಿಪಲ್ ಇಂಜಿನ್ ಸರಕಾರ, ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗಲಿಲ್ಲ. ಅದಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ನಮಗೆ ಜನ ಬೆಂಬಲ ವ್ಯಕ್ತವಾಗಿದೆ ಎಂದರು.
ಕಳಸಾ ಬಂಡೂರಿ ಯೋಜನೆ ಡಿಪಿಆರ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗುರುವಾರ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಯಾವ ಡೇಟ್ ಇಲ್ಲ. ಬರೀ ರೈತರಿಗೆ ಚಾಕಲೇಟ್ ಕೊಡುತ್ತಿದ್ದಾರೆ. ಯಡಿಯೂರಪ್ಪ ಹಿಂದೆ ಒಂದೇ ತಿಂಗಳಲ್ಲಿ ಯೋಜನೆ ಆರಂಭಿಸುತ್ತೇವೆ ಎಂದಿದ್ದರು. ಜೋಶಿ ದೊಡ್ಡ ಸ್ಥಾನದಲ್ಲಿದ್ದು ಹೀಗೆ ಯಾಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜ. 2 ರಂದು ಹುಬ್ಬಳಿಯಲ್ಲಿನ ಮಹದಾಯಿ ಸಮಾವೇಶ ನಿಲ್ಲಿಸುವುದಿಲ್ಲ. ಇದೀಗ ಕೃಷ್ಣ ವಿಚಾರವಾಗಿ ವಿಜಯಪುರದಲ್ಲಿ ಸಮಾವೇಶಕ್ಕೆ ಸುರ್ಜೇವಾಲಾ, ಸಿದ್ದರಾಮಯ್ಯ, ನಾನು ಹೋಗುತ್ತಿದ್ದೇವಿ. ಮುಂದೆ ನಮ್ಮ ಸರಕಾರ ಬಂದೇ ಬರುತ್ತದೆ. ನಾವು ಸಮಸ್ಯೆ ಬಗೆಹರಿಸುತ್ತೇವೆ. ಕಳಸಾ ಬಂಡೂರಿ ಯೋಜನೆ ಡಿಪಿಆರ್ ಗೆ ಅನುಮೋದನೆ ಎಂಬುದು ಒಂದು ಪೇಪರ್, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.