Advertisement

ಬಿಜೆಪಿ ವಿರೋಧದ ಮಧ್ಯೆ ವಿವಿ ವಿಧೇಯಕಕ್ಕೆಅಂಗೀಕಾರ

11:48 AM Jun 21, 2017 | |

ವಿಧಾನಸಭೆ: ಬಿಜೆಪಿಯ ತೀವ್ರ ವಿರೋಧದ ನಡುವೆಯೇ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017 ನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

Advertisement

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ವಿಧೇಯಕದ ಮಹತ್ವದ ಕುರಿತು ವಿವರಿಸಿ, ವಿಶ್ವವಿದ್ಯಾಲಯಗಳನ್ನು ಸರ್ಕಾರದ ಹತೋಟಿಗೆ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ. ವಿಶ್ವವಿದ್ಯಾಲಯಗಳ
ಕುಲಪತಿಗಳ ನೇಮಕ ಮಾಡುವಲ್ಲಿ ನಾಲ್ಕು ಜನರ ಶೋಧನಾ ಸಮಿತಿ ಇರುವುದರಿಂದ ಶೋಧನಾ ಸಮಿತಿ ಸದಸ್ಯರ ಸಂಖ್ಯೆಯನ್ನು ಐದಕ್ಕೆ ಹೆಚ್ಚಳ ಮಾಡಲು ಯುಜಿಸಿ ನಿಯಮದಲ್ಲಿಯೇ ಅವಕಾಶವಿರುವುದರಿಂದ ಐವರು ಸದಸ್ಯರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.

ವಿ.ಸಿ.ಗಳ ನೇಮಕ ವಿಳಂಬವಾಗುವು ದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸಲು ಮೂರು ತಿಂಗಳು ಮೊದಲೇ ಕುಲಪತಿಗಳ ಶೋಧನಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.24ರಷ್ಟಿದ್ದರೆ, ರಾಜ್ಯದ ಲ್ಲಿ ಶೇ.28.5 ಇದೆ. ಇದನ್ನು
ಶೇ.40ಕ್ಕೆ ಹೆಚ್ಚಳ ಮಾಡುವ ಉದ್ದೇಶ ಹೊಂದಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿ.ಸಿ. ಹಾಗೂ ಕುಲಸಚಿವರಿಗೆ ಹೆಚ್ಚಿನ ಆದ್ಯತೆ ನೀಡಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು.

ಸರ್ಕಾರದ ಸಮಗ್ರ ತಿದ್ದುಪಡಿ ವಿಧೇಯಕಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ವಿವಿಗಳ ಸ್ವಾಯತ್ತತೆಗೆ ಧಕ್ಕೆ ತರಲು ಹಾಗೂ ತನ್ನ ಹಿಡಿತಕ್ಕೆ ವಿವಿಗಳನ್ನು ತರಲು ಈ ಪ್ರಯತ್ನ ನಡೆಸುತ್ತಿದೆ.

Advertisement

ಇದರಿಂದ ವಿಶ್ವವಿದ್ಯಾಲಯಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌, ಅರವಿಂದ ಲಿಂಬಾವಳಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದರು.

ಇದು ಮಹತ್ವದ ವಿಧೇಯಕ ಆಗಿರುವುದರಿಂದ ಈ ಬಗ್ಗೆ ಸಾರ್ವಜನಿಕ ಚರ್ಚೆಯ ಅಗತ್ಯವಿದೆ. ವಿವಿಗಳಿಗೆ ಸ್ವಾಯತ್ತತೆ ನೀಡಿ, ವಿವಿಗಳ ಮೇಲೆ ನಿಯಂತ್ರಣ ಹೇರಿದರೆ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ವಿವಿಗಳ ಮೌಲ್ಯ ಕುಸಿತವಾಗುತ್ತದೆ. ಆಗ ವಿದ್ಯಾರ್ಥಿಗಳು ಹೊರ ರಾಜ್ಯದ ವಿವಿಗಳಿಗೆ ಹೋಗುವ ಸಂದರ್ಭ ಬರುತ್ತದೆ. ಇದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಆದರೆ, ಬಸವರಾಜ ರಾಯರಡ್ಡಿ ಪ್ರತಿಕ್ರಿಯಿಸಿ, ಪ್ರತಿಪಕ್ಷಗಳ ನಾಯಕರು ವಿಧೇಯಕದ ಬಗ್ಗೆ ಸಂಶಯ ಪಡುವ ಅಗತ್ಯವಿಲ್ಲ. ಸರ್ಕಾರ ಯಾವುದನ್ನೂ ಹಿಡಿತಕ್ಕೆ ತೆಗೆದುಕೊಳ್ಳಲು ಬಯಸುತ್ತಿಲ್ಲ. ವಿಧೇಯಕಕ್ಕೆ ಸದನದ ಒಪ್ಪಿಗೆ ನೀಡುವಂತೆ ಕೋರಿದರು.

ಸರ್ಕಾರದ ನಿಲುವನ್ನು ವಿರೋಧಿಸಿ ಬಿಜೆಪಿ ಸಭಾತ್ಯಾಗ ಮಾಡಿತು. ಬಿಜೆಪಿ ಸಭಾತ್ಯಾಗದ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next