Advertisement

ಬಿಜೆಪಿಯೇ ದೇಶದಿಂದ ಮುಕ್ತವಾಗುತ್ತಿದೆ

10:03 AM Dec 30, 2019 | Lakshmi GovindaRaj |

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವು ನೀಡಿದ್ದ ಭರವಸೆಗಳನ್ನೆಲ್ಲಾ ಹುಸಿ ಮಾಡಿ, ಅವರನ್ನು ಬೆಂಬಲಿಸಿದ್ದ ವಿದ್ಯಾರ್ಥಿಗಳು, ಯುವಕರಿಗೆ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ಇದರ ಪರಿಣಾಮವಾಗಿ “ಕಾಂಗ್ರೆಸ್‌ ಮುಕ್ತ ಭಾರತ’ ಎನ್ನುತ್ತಿದ್ದ ಬಿಜೆಪಿಯೇ ದೇಶದಿಂದ ಮುಕ್ತವಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ “ಸಂವಿಧಾನ ರಕ್ಷಿಸಿ- ಭಾರತ ಉಳಿಸಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎರಡು ವರ್ಷದ ಹಿಂದೆ ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿ ಇದೀಗ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯಗಳನ್ನು ಕಳೆದುಕೊಂಡಿದೆ. ಮುಂದಿನ ಚುನಾವಣೆಗಳಲ್ಲಿ ಕರ್ನಾಟಕ, ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ವೈ ಹಿಂಬಾಗಿಲ ಗಿರಾಕಿ: ಹಿಂಬಾಗಿಲ ಗಿರಾಕಿ ಬಿ.ಎಸ್‌ಯಡಿಯೂರಪ್ಪ ಅವರು ನಮ್ಮ ಶಾಸಕರನ್ನು ತಲಾ 30 ಕೋಟಿ ರೂ. ನಂತೆ ಖರೀದಿಸಿ ಅಧಿಕಾರಕ್ಕೆ ಬಂದಿದ್ದಾರೆಯೇ ಹೊರತು ನ್ಯಾಯಯುತವಾಗಿ ಅಧಿಕಾರ ಪಡೆದಿಲ್ಲ. ಇಡೀ ದೇಶವೇ “ಬಿಜೆಪಿ ಮುಕ್ತ ಭಾರತ’ದತ್ತ ಹೋಗುತ್ತಿದೆ. ಹಾಗಾಗಿ, ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸ ಬೆಳೆಸಿಕೊಂಡು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಪ್ರಧಾನಿ ಮೋದಿಯವರು ಚೌಕಿದಾರ ಎಂದು ಕರೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರಿಗೆ 30 ಕೋಟಿ ರೂ.ನೀಡಿ ಅಧಿಕಾರ ಪಡೆದಾಗ ಮೋದಿಜೀ ಚೌಕಿದಾರ ಕೆಲಸವನ್ನು ಏಕೆ ಮಾಡಲಿಲ್ಲ. ದೇಶದ ಬಡತನ, ಶಿಕ್ಷಣ, ನಿರುದ್ಯೋಗ, ಮೀಸಲಾತಿ, ಆರ್ಥಿಕ ಬೆಳವಣಿಗೆ ಬಗ್ಗೆ ಮಾತನಾಡದೆ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ ಸರಾಸರಿ ಶೇ.9ರಷ್ಟಿದ್ದ ಜಿಡಿಪಿ ಶೇ.2.5ಕ್ಕೆ ಕುಸಿದಿದೆ.

ಹಾಗಿದ್ದರೂ ಧರ್ಮ, ಜಾತಿಗಳನ್ನು ಒಡೆದು ರಾಜಕೀಯ ಮಾಡಲು ಬಿಜೆಪಿ ಮುಂದಾಗಿದೆ. ಬಿಜೆಪಿಯವರಿಂದ ಸಂವಿಧಾನವನ್ನು ರಕ್ಷಿಸಬೇಕಿದೆ ಎಂದು ಹೇಳಿದರು. ಪ್ರಧಾನಿ ಮೋದಿಯವರು ಮಹಾನ್‌ ದೇಶಭಕ್ತ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈ ಗಿರಾಕಿ ಹುಟ್ಟಿದ್ದೇ ಸ್ವಾತಂತ್ರ್ಯ ದೊರೆತ ಬಳಿಕ. ಬಿಜೆಪಿಯವರು ಇತಿಹಾಸ ತಿರುಚುವುದರಿಂದಲೇ ಯುವ ಜನರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.

Advertisement

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಗೋಲಿಬಾರ್‌; ಪರಮೇಶ್ವರ್‌: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ದೇಶವನ್ನು ಹಿಂದೂ ರಾಷ್ಟ್ರವೆಂದು ಕರೆಯದೆ ಭಾರತ ಎಂದು ಕರೆಯಲಾಗಿದೆ. ಸರ್ವಧರ್ಮೀ ಯರು ನೆಮ್ಮದಿಯಿಂದ ಬದುಕಬೇಕೆಂಬ ಕಾರಣಕ್ಕೆ ಇದನ್ನು ಜಾತ್ಯತೀತ ರಾಷ್ಟ್ರವಾಗಿಸಲಾಗಿದೆ. ಇದನ್ನೂ ಮೀರಿ ರೂಪಿಸಿದ ಸಿಎಎ ಕಾಯ್ದೆ ಗೆ ವಿರೋಧ ವ್ಯಕ್ತವಾಗಿ ಗಲಭೆ ನಡೆಯಿತು. ಈ ಹೋರಾಟದಲ್ಲಿ ವಿದ್ಯಾರ್ಥಿಗಳನ್ನು ಕೊಲೆ ಮಾಡುವುದನ್ನು ಜಗತ್ತು ನೋಡಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಗೋಲಿಬಾರ್‌ ಮಾಡುತ್ತದೆ ಎಂದು ದೂರಿದರು.

ಎನ್‌ಆರ್‌ಸಿ ಜಾರಿ ಸಾಧ್ಯವಿಲ್ಲ: ದಿನೇಶ್‌ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು 20 ಬಾರಿ ಎನ್‌ಸಿಆರ್‌ ಕುರಿತು ಹೇಳಿದ್ದಾರೆ. ನಂತರ, ಅದರ ಬಗ್ಗೆ ಮಾತನಾಡಿಲ್ಲ ಎಂದು ಸುಳ್ಳು ಹೇಳುತ್ತಾರೆ. ಪ್ರಧಾನಿ ಮೋದಿಯವರು ತಿಪ್ಪರಲಾಗ ಹಾಕಿದರೂ ಎನ್‌ಆರ್‌ಸಿ ಜಾರಿ ಸಾಧ್ಯವಿಲ್ಲ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಿಎಎ ಜಾರಿಯಾದರೆ ಆದಿವಾಸಿ, ಅನಕ್ಷರಸ್ಥರು ಎಲ್ಲಿಂದ ದಾಖಲೆ ತರುತ್ತಾರೆ? ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಬಿಜೆಪಿಯ ಈ ಗುಪ್ತ ಕಾರ್ಯಸೂಚಿಯನ್ನು ನಿರ್ನಾಮ ಮಾಡುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮೊದಲು, ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸದ್ಭಾವನಾ ಯಾತ್ರೆ ನಡೆಯಿತು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.

ಏಕೀಕರಣಕ್ಕೆ ಹೋರಾಡಿದವರಲ್ಲಿ ಉ.ಕ.ದವರೇ ಹೆಚ್ಚು
ಬಾಗಲಕೋಟೆ: “5ಕೆ.ಯಿಂದ ಕರ್ನಾಟಕ ರಚನೆಯಾಗಿದೆ’ ಎಂಬ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ-ದಕ್ಷಿಣ ಎಂದು ಹೇಳಿ ಭಿನ್ನಾಭಿಪ್ರಾಯ ಮಾಡಬಾರದು. ನಾವೆಲ್ಲರೂ ಒಂದೇ. ಎಲ್ಲರೂ ಕನ್ನಡಿಗರು. ಕನ್ನಡಾಂಬೆಯ ಮಕ್ಕಳು. ಉತ್ತರ ಕರ್ನಾಟಕದ ಅನೇಕ ನಾಯಕರು ಏಕೀಕರಣಕ್ಕಾಗಿ ಹೋರಾಡಿ ದ್ದಾರೆ. ನಮ್ಮ ಪಕ್ಷದ ಯಾವುದೇ ನಾಯಕರಿರಲಿ, ಅಖಂಡ ಕರ್ನಾಟಕದ ಕನಸನ್ನು ಮುಂದುವರಿಸಿ ಕೊಂಡು ಹೋಗಬೇಕು.

ಆ ರೀತಿ ಉತ್ತರ-ದಕ್ಷಿಣ ಅನ್ನುವ ಮಾತು ಯಾರ ಬಾಯಿಂದಾನೂ ಬರಬಾರದು. ಅದು ಸರಿಯಲ್ಲ ಎಂದರು. ಬಹು ಸಂಖ್ಯಾತ ಲಿಂಗಾಯತರು ಉತ್ತರ ಕರ್ನಾಟಕ ದಲ್ಲಿದ್ದು, ಪ್ರಾದೇಶಿಕ ಅಸಮಾನತೆ ಹೋಗಲಾಡಿ ಸಲು ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಸ್‌.ಎಂ. ಕೃಷ್ಣ ಆಯೋಗ ರಚಿಸಿದ್ದರು. ಆಯೋಗ ವರದಿ ಕೊಟ್ಟಿದೆ. ವರದಿ ಪ್ರಕಾರ, ಎಲ್ಲೆಲ್ಲಿ ಪ್ರಾದೇಶಿಕ ಅಸಮಾನತೆ ಇದೆಯೋ ಅದನ್ನು ಹೋಗಲಾಡಿಸಲು ಇಂದಿಗೂ ಪ್ರಯತ್ನ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next