Advertisement

ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ :  ಖರ್ಗೆ ವ್ಯಂಗ್ಯ

12:30 AM Jan 13, 2019 | |

ಬೆಂಗಳೂರು : ಬಿಜೆಪಿಯವರು ಸಂಕ್ರಾಂತಿ ಬಳಿಕ ಕ್ರಾಂತಿ ಮಾಡುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

Advertisement

ಸದಾಶಿವ ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,  18 ಶಾಸಕರು ರಾಜೀನಾಮೆ ಕೊಟ್ಟು ಹೋಗುತ್ತಾರಾ? ಅದು ಸಾಧ್ಯವಿದೆಯೇ? ಕ್ರಾಂತಿ ಏನೂ ಆಗೋದಿಲ್ಲ. ಒಂದು ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ಹಾಗೆಯೇ ಮೈತ್ರಿ ಸರ್ಕಾರದಲ್ಲಿ ಸಮಸ್ಯೆಗಳು ಇರುತ್ತವೆ. ಅದನ್ನೆಲ್ಲ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ ಇರಬಹುದು. ಇದಕ್ಕಾಗಿ ಪಕ್ಷ ಬಲಿಕೊಡಲು ಸಾಧ್ಯವೇ? ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮೊದಲಾದ ಹಿರಿಯ ನಾಯಕರು ಅಸಮಾಧಾನಿತರನ್ನು ಕರೆದು ಸಮಾಧಾನ ಮಾಡ್ತಾರೆ ಎಂದರು.

ಅಮೇಥಿಯಿಂದ ರಾಹುಲ್‌ ಸ್ಪರ್ಧೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹೊರಗಿಟ್ಟು ಎಸ್ಪಿ, ಬಿಎಸ್‌ಪಿ ಮೈತ್ರಿ ಮಾಡಿಕೊಂಡಿರುವುದು ಅವರಿಬ್ಬರಿಗೆ ಬಿಟ್ಟಂತಹ ವಿಚಾರ. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಿವೆ. ಒಂದೇ ಸಿದ್ಧಾಂತ ಹೊಂದಿದವರೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನಮ್ಮ ಉದ್ದೇಶ. ಇನ್ನೂ ಸಮಯವಿದೆ ಜಾತ್ಯಾತೀತ ಸಿದ್ಧಾಂತದವರು ಒಟ್ಟಾಗಿ ಹೋಗುವ ಪ್ರಯತ್ನ ಮಾಡುತ್ತೇವೆ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆಯವರ ಶಕ್ತಿ ಇದೆ ಅದನ್ನು ನಾವು ಪರಿಗಣಿಸಬೇಕು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಂದಿನ ಲೋಕಸಭೆ ಚುನಾವಣೆಗೆ ಅಮೇಥಿಯಿಂದಲೇ ಸ್ಪರ್ಧೆ ಮಾಡಲಿದ್ದಾರೆ. ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಅವರು ಕಾಂಗ್ರೆಸ್‌ ವಿರುದ್ಧ ಸ್ಪರ್ಧೆ ಮಾಡಿದ್ದವರು. ಹೀಗಾಗಿ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಷ್ಟ್ರ ಮಟ್ಟದಲ್ಲಿ ಬೇರೆ ಪಕ್ಷವನ್ನು ಒಗ್ಗೂಡಿಸಲು ಪ್ರಯತ್ನ ಮಾಡ್ತಿದ್ದಾರೆ. ಆದರೆ, ಜಾತ್ಯಾತೀತ ಶಕ್ತಿಗಳೆಲ್ಲ ಒಂದಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next