ನವ ದೆಹಲಿ : ಕೇಂದ್ರ ಸರ್ಕಾರ ಈ ಹೊತ್ತಿಗೂ ಕೂಡ ತನ್ನ ಪ್ರತಿಷ್ಟೆಯನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿ ನಿವ್ವಳ ನಷ್ಟ ಅನುಭವಿಸಿದ ಟಾಟಾ ಮೋಟಾರ್ಸ್
ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಸೋಡಿಯಾ, ಕೇಂದ್ರ ಸರ್ಕಾರ ಕಳಪೆ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಸಿಂಗಾಪುರದಲ್ಲಿ ಪ್ರತಿಷ್ಟೆ ಉಳಿಸಿಕೊಳ್ಳುವುದಕ್ಕೆ ಹೆಚ್ಚು ಕಾಳಜಿ ವಹಿಸುತ್ತದೆ. ಆದರೇ ಅಲ್ಲಿ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿರುವುದರ ಬಗ್ಗೆ ಏನೂ ಆತಂಕವಿಲ್ಲ. ಕೇಜ್ರಿವಾಲ್ ಸಿಂಗಾಪುರದ ಸ್ಥಿತಿ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ವಿಷಯ ಇರುವುದು ಸಿಂಗಾಪುರದ ಬಗ್ಗೆ ಅಲ್ಲ ಮಕ್ಕಳ ಬಗ್ಗೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಿಂಗಾಪುರದಲ್ಲಿ ಹೊಸ ರೂಪದ ಕೋವಿಡ್ 19 ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ಭಾರತ ಮತ್ತು ಸಿಂಗಾಪುರ ನಡುವಿನ ರಾಜತಾಂತ್ರಿಕ ಸಾಲಿಗೆ ನಾಂದಿ ಹಾಡಿದೆ ಎಂದು ನೆನಪಿಸಿಕೊಳ್ಳಬಹುದಾಗಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್, ನಿನ್ನೆ ಕೇಜ್ರಿವಾಲ್ ಸಿಂಗಾಪುರ್ ನಲ್ಲಿ ಪತ್ತೆಯಾದ ಕೋವಿಡ್ ರೂಪಾಂತರಿ ಅಲೆಯ ಬಗ್ಗೆ ಮಾತಾಡಿರುವುದಕ್ಕೆ ಪ್ರತಿಯಾಗಿ, ‘ದೆಹಲಿ ಮುಖ್ಯಮಂತ್ರಿ ಭಾರತಕ್ಕಾಗಿ ಮಾತನಾಡುವುದಿಲ್ಲ, ಉಭಯ ದೇಶಗಳು ಕೋವಿಡ್ ಸೋಂಕನ್ನು ಎದುರಿಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿರುವುದಕ್ಕೆ ಉತ್ತರವಾಗಿ ಸಿಸೋಡಿಯಾ ಹೀಗೆ ಹೇಳಿದ್ದಾರೆ.
ಇನ್ನು, ಕೇಜ್ರಿವಾಲ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ, ಸಿಂಗಾಪುರ್ ಭಾರತೀಯ ರಾಯಭಾರಿಗೆ “ಆಧಾರರಹಿತ ಪ್ರತಿಪಾದನೆಗಳಿಗೆ” ತನ್ನ ಬಲವಾದ ಆಕ್ಷೇಪವನ್ನು ತಿಳಿಸಿದೆ.
ಕೋವಿಡ್ 19 ರೂಪಾಂತರಗಳ ಬಗ್ಗೆ ಪ್ರತಿಕ್ರಿಯಿಸಲು ದೆಹಲಿ ಮುಖ್ಯಮಂತ್ರಿಗೆ ಯಾವುದೇ ಅರ್ಹತೆಯಿಲ್ಲ ಎಂದು ಭಾರತೀಯ ಹೈಕಮಿಷನರ್ ಪಿ ಕುಮಾರನ್ ಸಿಂಗಾಪುರ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಗಾಪುರ ವಿದೇಶಾಂಗ ಸಚಿವಾಲಯ “ಸಿಂಗಾಪುರ್ ರೂಪಾಂತರ” ಎನ್ನುವುದಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೋವಿಡ್-19 ಪ್ರಕರಣಗಳಲ್ಲಿ ಪ್ರಚಲಿತದಲ್ಲಿರುವ ಬಿ .1.617.2 ರೂಪಾಂತರವು ಭಾರತದಲ್ಲಿ ಮೊದಲು ಪತ್ತೆಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಮಂಗಳೂರು: ಮಾಸ್ಕ್ ಹಾಕದ ವೈದ್ಯ ; ತರಾಟೆಗೆ ತೆಗೆದುಕೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ