Advertisement

ಬಿಜೆಪಿಯಿಂದ ಸಾಮರಸ್ಯ ಹಾಳು: ಡಿಕೆಶಿ

03:47 PM Apr 06, 2022 | Niyatha Bhat |

ಭದ್ರಾವತಿ: ಧರ್ಮದ ಹೆಸರಿನಲ್ಲಿ ಸಾಮರಸ್ಯವನ್ನು ಹಾಳುಮಾಡುವ ಕೆಲಸವನ್ನು ಈಗಾಗಲೆ ದಕ್ಷಿಣ ಕನ್ನಡದಲ್ಲಿ ಮಾಡಿರುವ ಬಿಜೆಪಿ ಈಗ ಆ ಕೆಲಸವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಿಸಿದೆ. ಇದಕ್ಕೆ ಕಾಂಗ್ರೆಸ್‌ ಪಕ್ಷ ಅಚಿತ್ಯ ಹಾಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಶಾಸಕ ಬಿ.ಕೆ.ಸಂಗಮೇಶ್ವರ ಅವರ ಗೃಹ ಕಚೇರಿಯಲ್ಲಿ ಮಂಗಳವಾರ ಜರುಗಿದ ಪಕ್ಷದ ಸದಸ್ಯತ್ವ ನೋಂದಣಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರಧ್ವಜ, ಸಂವಿಧಾನ ಹಾಗೂ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ಆರಂಭವಾಗಿದೆ. ಇದು ದೊಡ್ಡ ಅವಮಾನದ ಸಂಗತಿ. ಇದನ್ನು ಮೆಟ್ಟಿ ನಿಲ್ಲುವ ಮೂಲಕ ಪಕ್ಷ ಸಂಘಟನೆ ಮಾಡುವ ಕೆಲಸ ಆಗಬೇಕು. ಜಿಲ್ಲೆಯಲ್ಲಿ ಈ ರೀತಿಯ ಭಾವನೆ ಬೆಳೆದಲ್ಲಿ ಯಾರೊಬ್ಬರು ಸಹ ಇಲ್ಲಿ ಹೂಡಿಕೆ ಮಾಡಲು ಬರುವುದಿಲ್ಲ. ಯಡಿಯೂರಪ್ಪನವರ ಅವಧಿಯಲ್ಲಿ ಜನಪರ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಈ ರೀತಿ ಅಸಹಿಷ್ಣುತೆ ವಾತಾವರಣ ಮುಂದುವರೆದಲ್ಲಿ ಯಾವ ಬಂಡವಾಳಗಾರ ಬಂದು ಇಲ್ಲಿ ಹಣ ಹೂಡಲ್ಲ. ಯುವಕರು ಹೊರಗಡೆ ಹೋಗಿ ದುಡಿಮೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿ ಬರಲು ಅವಕಾಶ ನೀಡಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಜಿಲ್ಲೆಗೆ ವಿಮಾನ ನಿಲ್ದಾಣ ಬರುತ್ತಿದೆ. ಈ ರೀತಿಯ ಪರಿಸ್ಥಿತಿ ಇದ್ದರೆ ಯಾವ ಉದ್ಯಮಿ ಬರುತ್ತಾರೆ. ದಿನಕ್ಕೊಂದು ವಿಷಯ ಇಟ್ಟುಕೊಂಡು ಬೆಂಕಿ ಹಚ್ಚಿದರೆ ನಾವು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕೆ ದೊಡ್ಡ ಆಂದೋಲನ ಹಮ್ಮಿಕೊಂಡು ಹೋರಾಟ ಮಾಡುವ ಮೂಲಕ ಈ ಜಿಲ್ಲೆಯ ಜತೆಗೆ ರಾಜ್ಯದ ಅಭಿವೃದ್ಧಿ ಮಾಡಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಜಾತ್ರೆ,ಹಬ್ಬ ದಿನನಿತ್ಯ ನಡೆಯುತ್ತೇ ಅಲ್ಲಿ ಅವರಿಗೆ ಅವಕಾಶವಿಲ್ಲ,ಇವರಿಗೆ ಪ್ರವೇಶ ಇಲ್ಲ ಎಂದು ಹೇಳುವ ಮೂಲಕ ಮಾನವೀಯತೆ ಮೀರಿ ವರ್ತಿಸಿದರೆ ಅದಕ್ಕೆ ಅಂತ್ಯ ಹಾಡುವ ಕೆಲಸ ಮಾಡಬೇಕು. ಇದಕ್ಕೆ ಸಜ್ಜಾಗಿ ಇದರೊಂದಿಗೆ ಪಕ್ಷದ ಆಧಾರಸ್ತಂಭವಾದ ಸದಸ್ಯತ್ವ ಅಭಿಯಾನ ಯಶಸ್ವಿ ಮಾಡಿ ಈ ಮೂಲಕ ಜನರ ಹೃದಯ ಗೆಲ್ಲುವ ಕೆಲಸ ಮಾಡಿ’ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲೆಯ ಮುಖಂಡರ,ಶಾಸಕರ ಹಾಗೂ ಮಾಜಿ ಶಾಸಕರ ದೊಡ್ಡ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಇಲ್ಲಿಗೆ ಅಗತ್ಯ ಇರುವ ಜನಪರ ಹೋರಾಟವನ್ನು ಪಕ್ಷ ಹಮ್ಮಿಕೊಳ್ಳಲಿದೆ. ಜತೆಗೆ ಮುಂದಿನ ವಿಧಾನಸಭೆಯಲ್ಲಿ ಇಲ್ಲಿನ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿರುತ್ತಾರೆ ಎಂಬ ವಿಶ್ವಾಸವಿದೆ. ಇದಕ್ಕಾಗಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸುತ್ತೇನೆ. ಅದಕ್ಕೆ ತಕ್ಕಂತೆ ಕೆಲಸ ಮಾಡಲು ಮುಂದಾಗಿ ಎಂದು ವೇದಿಕೆಯಲ್ಲಿದ್ದ ಮುಖಂಡರಿಗೆ ಕರೆ ನೀಡಿದರು.

Advertisement

ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿದರು. ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಸಚಿವಾರದ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಶಿವಮೊಗ್ಗ ಕಾರ್ಪೊರೇಟರ್‌ ಎಚ್‌.ಸಿ. ಯೋಗೇಶ್‌, ಕೆಪಿಸಿಸಿ ಸದಸ್ಯತ್ವ ಜವಾಬ್ದಾರಿ ಹೊತ್ತಿರುವ ಆರ್‌.ವಿ. ವೆಂಕಟೇಶ್‌, ಸೂರಜ್‌ ಹೆಗ್ಡೆ, ಪ್ರಫುಲ್ಲಾ ಮಧುಕರ್‌, ಕಲಗೋಡು ರತ್ನಾಕರ, ಡಾ| ರಾಜನಂದಿನಿ ಕಾಗೋಡು, ಗ್ರಾಮಾಂತರ ಅಧ್ಯಕ್ಷ ಎಚ್‌. ಎಲ್‌. ಷಡಾಕ್ಷರಿ, ನಗರ ಅಧ್ಯಕ್ಷ ಟಿ.ಚಂದ್ರೇಗೌಡ, ಸಿ.ಎಂ. ಖಾದರ್‌, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್‌, ಉಪಾಧ್ಯಕ್ಷ ಚನ್ನಪ್ಪ, ಬಿ.ಟಿ. ನಾಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next