ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ, ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ ಮಂಡ್ಯ ಕ್ಷೇತ್ರವನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಳ್ಳುವ ವಿಶ್ವಾಸವಿದೆ ಎನ್ನುವ ಮೂಲಕ ಮಂಡ್ಯ ಬಿಜೆಪಿಯಿಂದ ಸ್ಪರ್ಧಿಸುವ ಪಟ್ಟನ್ನು ಬಿಟ್ಟುಕೊಟ್ಟಿಲ್ಲ. ರವಿವಾರ ಬೆಂಗಳೂರಿನ ಜೆಪಿ ನಗರದಲ್ಲಿನ ತಮ್ಮ ನಿವಾಸದಲ್ಲಿ ವಿವಿಧ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ವಿಷಯ ಪ್ರಕಟಿಸಿದರು.
ಸದ್ಯಕ್ಕೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಬಿಜೆಪಿಗೆ ಬಾಹ್ಯ ಬೆಂಬಲ ಅಷ್ಟೇ ಕೊಟ್ಟಿದ್ದೆ. ದೇಶದ ಭವಿಷ್ಯದ ಬಗ್ಗೆ ದೂರದೃಷ್ಟಿಯುಳ್ಳ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಬಿಜೆಪಿಯಿಂದಲೇ ಸ್ಪರ್ಧಿಸಲು ಇಚ್ಛಿಸಿದ್ದು, ಇದಕ್ಕೆ ಎಲ್ಲರೂ ಬೆಂಬಲಿಸುವುದಾಗಿ ಸಭೆಯಲ್ಲಿ ಹೇಳಿದ್ದಾರೆ. ಮಂಡ್ಯದಲ್ಲಿ ಮೊದಲಿಗಿಂತ ಈಗ ಬಿಜೆಪಿಗೆ ಪೂರಕವಾದ ವಾತಾವರಣ ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೇನೆ ಎಂದಿದ್ದಾರೆ.
ಪಕ್ಷ ಸಂಘಟನೆ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ತಾಲೂಕು, ಜಿಲ್ಲೆಗಳ ಸಭೆ ನಡೆಸಿದಂತೆ ಮಂಡ್ಯದ ಸಭೆಯನ್ನೂ ನಡೆಸುತ್ತಿದ್ದೇನೆ. ಸುಮಲತಾ ಸುದ್ದಿ ನನಗೆ ಬೇಡ. ನನ್ನ ಪಕ್ಷದ ಸಂಘಟನೆಗಾಗಿ ಸಭೆ ಕರೆದಿದ್ದೇನೆ. ಬೆಂಗಳೂರು ಗ್ರಾಮಾಂತರ ಎಲ್ಲೂ ಹೋಗಲ್ಲ. ಎಲ್ಲವೂ ಸದ್ಯದಲ್ಲೇ ತೀರ್ಮಾನ ಆಗಲಿದೆ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ