ಬೆಂಗಳೂರು: ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣ ಪರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಗುರುವಾರ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಗುರುವಾರ ಅಭ್ಯರ್ಥಿ ವಿ.ಸೋಮಣ್ಣ, ಬಿಜೆಪಿಯ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ಇಡೀ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಸದಾನಂದಗೌಡ, ವಿ.ಸೋಮಣ್ಣ ಅವರು ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಅವರನ್ನು ಮತ್ತೂಮ್ಮೆ ಆಶೀರ್ವಾದ ಮಾಡಿ ಎಂದು ಕೋರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದ್ದು, ಬಿಜೆಪಿಯೊಂದೇ ಪರ್ಯಾಯ ಎಂದು ಪ್ರತಿಪಾದಿಸಿದರು.
ಜತೆಗೆ, ಅಗ್ರಹಾರ ದಾಸರಹಳ್ಳಿ, ಡಾ.ರಾಜ್ಕುಮಾರ್ ವಾರ್ಡ್, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಭಾವಿ , ನಾಯಂಡಹಳ್ಳಿ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿ ಪಕ್ಷದ ನಾಯಕರು ವಿ.ಸೋಮಣ್ಣ ಅವರಿಗೆ ಮತ ನೀಡುವಂತೆ ಕೋರಿದರು.
ವಿ.ಸೋಮಣ್ಣ ಮಾತನಾಡಿ, ಬಿನ್ನಿಪೇಟೆ ಶಾಸಕನಾಗಿದ್ದಾಗಿನಿಂದಲೂ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಮೂಲಸೌಕರ್ಯ ಅಭಿವೃದ್ಧಿ, ಉದ್ಯಾನವನ ಮತ್ತು ಕ್ರೀಡಾಂಗಣ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.