Advertisement
2008ರಲ್ಲಿ ವರ್ತೂರು ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಕ್ಷೇತ್ರವಾದ ನಂತರ ಸಿ.ವಿ.ರಾಮನ್‌ನಗರದಿಂದ ಎರಡು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ಎಸ್.ರಘು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪಿ.ರಮೇಶ್ ಹಾಗೂ ಕಾಂಗ್ರೆಸ್ ಟಿಕೆಟ್ ಪಡೆದಿರುವ ಬಿಬಿಎಂಪಿ ಹಾಲಿ ಮೇಯರ್ ಆರ್.ಸಂಪತ್‌ರಾಜ್ ಈ ಬಾರಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.
Related Articles
Advertisement
ಇನ್ನು ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿರುವ ಹಾಗೂ ಕಾಂಗ್ರೆಸ್ ಟಿಕೆಟ್ ದೊರೆಯದೆ ಜೆಡಿಎಸ್ ಸೇರಿರುವ ರಮೇಶ್, ಸೋತರೂ ಕ್ಷೇತ್ರದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ತಮಗೆ ಮತ ನೀಡಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.
ಬಿಬಿಎಂಪಿ ಇತಿಹಾಸದಲ್ಲೇ ನಗರದ ಅಭಿವೃದ್ಧಿಗೆ ಯಾವುದೇ ಸರ್ಕಾರದ ನೀಡದಷ್ಟು ಅನುದಾನವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜತೆಗೆ ನಗರದ ಜನತೆಗೆ ಮೂಲ ಸೌಕರ್ಯ ಒದಗಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಜನರೆ ಈ ಬಾರಿ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಮೇಯರ್ ಸಂಪತ್‌ರಾಜ್ ಅವರದ್ದು.
ಕಳೆದ ಬಾರಿ ಹರಸಾಹಸ ಪಟ್ಟು ಟಿಕೆಟ್ ಗಿಟ್ಟಿಸಿಕೊಂಡು, ಬಿಜೆಪಿಯ ರಘು ವಿರುದ್ಧ ಕೇವಲ 7 ಸಾವಿರ ಮತಗಳ ಅಂತದಿಂದ ಸೋತ್ತಿದ್ದ ಪಿ.ರಮೇಶ್, ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ್ದಾರೆ. ಪರಿಣಾಮ ಕಾಂಗ್ರೆಸ್‌ನ ಮತಗಳು ರಮೇಶ್ ಹಾಗೂ ಸಂಪತ್‌ರಾಜ್ ನಡುವೆ ಹಂಚಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆಯಾ ಪಕ್ಷಗಳಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಗೆಲುವಿಗಾಗಿ ಬೆವರು ಹರಿಸುತ್ತಿದ್ದು, ಕ್ಷೇತ್ರದ ಪ್ರತಿಯೊಂದು ಬಡಾವಣೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿರುವ ದೇವಾಲಯ, ಚರ್ಚ್, ಮಸೀದಿಗಳಿಗೆ ಪಾದಯಾತ್ರೆ ಮೂಲಕ ಭೇಟಿ ನೀಡಿ ಆರ್ಶೀವದಿಸುವಂತೆ ಮನವಿ ಮಾಡುತ್ತಿದ್ದು, ಪ್ರತಿಪಕ್ಷದ ಅಭ್ಯಥಿಗಳ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದಾರೆ.
* ವೆಂ.ಸುನೀಲ್‌ಕುಮಾರ್