Advertisement

 ಬಿಜೆಪಿಯಿಂದ ಪ್ರಣಾಳಿಕಾ ಚಿಂತನ ಸಭೆ

10:12 AM Jan 08, 2018 | Team Udayavani |

ಡೊಂಗರಕೇರಿ: ರೇರಾ ಕಾಯಿದೆಯಲ್ಲಿ ಇನ್ನಷ್ಟು ಬದಲಾವಣೆ, ಜಿಎಸ್‌ಟಿ ಅನುಷ್ಠಾನದಲ್ಲಿ ಪರಿಪಕ್ವತೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕ್ರಮ. ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮಂಗಳೂರು ನಗರ ದಕ್ಷಿಣ ಬಿಜೆಪಿ ಸಮಿತಿ ವತಿಯಿಂದ ರವಿವಾರ ಹಮ್ಮಿಕೊಂಡ ಪ್ರಣಾಳಿಕಾ ಚಿಂತನ ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳಿವು.

Advertisement

ತೇಜಸ್ವಿನಿ ಆಸ್ಪತ್ರೆ ಮುಖ್ಯಸ್ಥ ಡಾ| ಶಾಂತಾರಾಮ ಶೆಟ್ಟಿ ಮಾತನಾಡಿ, ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಶೇ. 1.5 ಮಾತ್ರವೇ ಮೀಸಲಿಡಲಾಗಿದೆ. ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಅಲ್ಲದೆ ಜನರನ್ನು ಬಹುವಾಗಿ ಕಾಡುವ ಮಲೇರಿಯಾ, ಕ್ಯಾನ್ಸರ್‌, ಹೃದ್ರೋಗ ಚಿಕಿತ್ಸೆಯತ್ತ ಹೆಚ್ಚಿನ ಗಮನ ಅಗತ್ಯ ಎಂದರು.

ರೇರಾ ಕಾಯಿದೆ: ಗೊಂದಲ
ಕ್ರೆಡೈ ಜಿಲ್ಲಾಧ್ಯಕ್ಷ ಡಿ.ಬಿ. ಮೆಹ್ತಾ ಮಾತನಾಡಿ, ರೇರಾ ಕಾಯಿದೆಯ ಅನುಷ್ಠಾನದಲ್ಲಾದ ಗೊಂದಲದಿಂದಾಗಿ ಬಿಲ್ಡರ್‌ಗಳು ನಷ್ಟ ಅನುಭವಿಸುತ್ತಿದ್ದಾರೆ. ಫ್ಲ್ಯಾಟ್ ನಿರ್ಮಾಣವಾದರೂ ಮಾರಾಟ ಮಾಡಲಾಗದಂತಹ ಸ್ಥಿತಿಯಿದೆ. ಈ ಕಾಯಿದೆಯಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಕೆನರಾ ಚೇಂಬರ್ ಅಧ್ಯಕ್ಷೆ ವಾಟಿಕಾ ಪೈ ಮಾತನಾಡಿ, ಮಂಗಳೂರು ವಿಮಾನ ನಿಲ್ದಾಣ ರನ್‌ವೇಯನ್ನು 2,450 ಮೀ.
ನಿಂದ 3,050 ಮೀಟರ್‌ಗೆ ವಿಸ್ತರಿಸುವ ನಿಟ್ಟಿನಲ್ಲಿ ಅವಶ್ಯ ಗಮನ ನೀಡಬೇಕು. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದರು.

ಭರವಸೆ ಈಡೇರಿಸಿದೆ
ಕೇಂದ್ರ ಸರಕಾರವು ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಬಿಜೆಪಿ ಬಗ್ಗೆ ಜನರಿಗೆ ವಿಶ್ವಾಸ ಇದೆ ಎಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್‌ ನುಡಿದರು. ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್‌ ಹೆಗ್ಡೆ, ಕ್ರೆಡೈ ರಾಜ್ಯ ಉಪಾಧ್ಯಕ್ಷ ಪುಷ್ಪರಾಜ್‌ ಜೈನ್‌ ಮಾತನಾಡಿದರು. ಮುಖಂಡ ವಿಶ್ವೇಶ್ವರ ಭಟ್‌ ಬಂಗಾರಡ್ಕ, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಕಾರ್ಪೊರೇಟರ್‌ ಪ್ರೇಮಾನಂದ ಶೆಟ್ಟಿ, ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್‌, ಕ್ಯಾ| ಬಿೃಜೇಶ್‌ ಚೌಟ, ಪ್ರಭಾ ಮಾಲಿನಿ ಮೊದಲಾದವರು ಉಪಸ್ಥಿತರಿದ್ದರು.

Advertisement

ದ್ವೇಷ ರಾಜಕಾರಣ ಬೇಡಿ
ಪ್ರಣಾಳಿಕೆ ಸಭೆಯ ಬ್ಯಾನರ್‌ ನಲ್ಲಿ ಬಸವಣ್ಣನವರ ಚಿತ್ರ ಅಳವಡಿಸಿರುವುದು ಉತ್ತಮ. ಆದರೆ ಪಕ್ಷವೂ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಯಾವುದೇ ದ್ವೇಷ, ನಿಂದನೆಯ ರಾಜಕಾರಣ ಮಾಡದೇ, ಸಾಮರ್ಥ್ಯ ಆಧಾರಿತ ಸ್ಪರ್ಧೆ ನೀಡಬೇಕು ಎಂದು ಲೆಕ್ಕಪರಿಶೋಧಕ ಎಸ್‌.ಎಸ್‌. ನಾಯಕ್‌ ಸಲಹೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next