ಮಂಡ್ಯ: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಸರ್ಕಾರದ ನಾಮನಿರ್ದೇಶನಗಳಿಗೆ ಲಾಬಿ ನಡೆಯುತ್ತಿದ್ದು, ಅದರಂತೆ ಮಂಡ್ಯ ಜಿಲ್ಲೆಯಲ್ಲೂ ಆಕಾಂಕ್ಷಿತರ ದಂಡು ಹೆಚ್ಚಾಗಿದೆ.
ಈಗಾಗಲೇ ಕಾಡಾ, ಮೂಡಾಗಳಿಗೆ ಅಧ್ಯಕ್ಷರ ನೇಮಕ ನಡೆದಿದೆ. ಮನ್ ಮುಲ್, ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಸಹಕಾರ ಸಂಘಗಳಿಗೆ ಸರ್ಕಾರದಿಂದ ನಾಮ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಇದೀಗ ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಂತೆ ಜಿಲ್ಲೆಯಿಂದ ಪಟ್ಟಿ ರವಾನೆಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ನಗರಸಭೆ, ಪುರಸಭೆ, ಎಪಿಎಂಸಿಗಳಿಗೆ ನಾಮನಿರ್ದೇಶನ ಬಾಕಿ ಉಳಿದಿದ್ದು, ಅದರಲ್ಲಾದರೂ ನಮ್ಮನ್ನು ಪರಿಗಣಿಸಬೇಕು. ಅಲ್ಲದೆ, ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರ ಪಟ್ಟಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.
ಭುಗಿಲೇಳುವ ಅಸಮಾಧಾನ: ಮೂಡಾ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರನ್ನುನೇಮಕ ಮಾಡಿದಾಗಲೂ ವಿರೋಧ ವ್ಯಕ್ತವಾಗಿತ್ತು. ಮನ್‌ಮುಲ್‌ಗೆ ನಾಮನಿರ್ದೇಶಕರಾಗಿ ಕೆ.ಜಿ. ತಮ್ಮಣ್ಣ ಅವರನ್ನು ಆಯ್ಕೆ ಮಾಡಿದಾಗ ಅಸಮಾಧಾನ ಉಂಟಾಗಿತ್ತು. ಡಿಸಿಸಿ ಬ್ಯಾಂಕ್ ನಾಮನಿರ್ದೇಶಕರಾದ ಸಿ.ಪಿ.ಉಮೇಶ್,ಕಾಡಾ ಅಧ್ಯಕ್ಷ ಶಿವಲಿಂಗಯ್ಯಹಾಗೂ ಮೈಷುಗರ್ ಅಧ್ಯಕ್ಷರಾಗಿರುವ ಜೆ.ಶಿವಲಿಂಗೇಗೌಡ ಅವರ ನೇಮಕಕ್ಕೂ ವಿರೋಧ ವ್ಯಕ್ತವಾಗಿದ್ದು, ಬಹಿರಂಗವಾಗದಿದ್ದರೂಆಕಾಂಕ್ಷಿಗಳು, ಮುಖಂಡರು, ಕಾರ್ಯಕರ್ತರಲ್ಲಿ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ಅಲ್ಲದೆ, ಬಿಜೆಪಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕೇಳಿ ಬರುತ್ತಿದೆ.
ಪಕ್ಷ ಸಂಘಟನೆಗೆ ಹೊಡೆತ: ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿದಿರುವ ಕಾರ್ಯಕರ್ತರು ಅನೇಕರಿದ್ದಾರೆ.ಅವರನ್ನೆಲ್ಲಬಿಟ್ಟುಬೇರೆ ಕಡೆಯಿಂದಬರುವವರೆಗೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಮೂಲ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಮುಖ ಮಾಡುತ್ತಿಲ್ಲ. ಅಲ್ಲದೆ, ಕಾರ್ಯಕರ್ತರಲ್ಲಿಯೇ ವೈಯಕ್ತಿಕ ಭಿನ್ನಮತ, ಅಸಮಾಧಾನಗಳು ಹೆಚ್ಚಾಗಿದೆ. ಇದರಿಂದ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಪ್ರಮುಖ ಆಕಾಂಕ್ಷಿಗಳು: ರಾಜ್ಯದ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನಗಳಿಗೆ ಪರಿಗಣಿಸುವಂತೆ ಪ್ರಮುಖ ಮುಖಂಡರು ಮನವಿ ಮಾಡಿದ್ದಾರೆ. ಅದ ರಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯಡಾ.ಸಿದ್ದರಾಮಯ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಮಾಜಿ ಅಧ್ಯಕ್ಷರಾದ ಎಚ್ .ಪಿ.ಮಹೇಶ್, ಕೆ.ನಾಗಣ್ಣಗೌಡ, ನಗರ ಘಟಕ ಮಾಜಿ ಅಧ್ಯಕ್ಷಎಚ್.ಆರ್.ಅರವಿಂದ್,ಎಚ್.ಆರ್.ಅಶೋಕ್ ಕುಮಾರ್, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಟಿ. ಶ್ರೀಧರ್ ಸೇರಿದಂತೆಮತ್ತಿತರರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿಯ ಪಟ್ಟಿ ರವಾನಿಸಲಾಗಿದೆ.
ಜಿಲ್ಲೆಯಲ್ಲಿ ಆಕಾಂಕ್ಷಿತರ ಸಂಖ್ಯೆ ಹೆಚ್ಚಿದೆ. ಸುಮಾರು 200ಕ್ಕೂ ಹೆಚ್ಚು ಮುಖಂಡರ ಪಟ್ಟಿ ಸಿದ್ಧಪಡಿಸಿ, ವರಿಷ್ಠರಿಗೆ ಕಳುಹಿಸಲಾಗಿದೆ.ಯಾರಿಗೆ ನೀಡಿದರೂ ನಮ್ಮ ವಿರೋಧವಿಲ್ಲ.ಯಾರೇ ಅಧ್ಯಕ್ಷರು, ಉಪಾಧ್ಯಕ್ಷರು, ನಾಮನಿರ್ದೇಶನಗೊಂಡರೂ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು.
– ಕೆ.ಜೆ.ವಿಜಯ ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ