ಬೆಂಗಳೂರು: ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಮತ್ತು ಉಗ್ರರ ಪರ ಇರುವ ಕಾಂಗ್ರೆಸ್ ವಿರುದ್ಧ ಫೆ. 27 ಮತ್ತು 28ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳು ಕಾಂಗ್ರೆಸ್ ಕೂಸು ಎಂದ ಅವರು, ಸಿದ್ದರಾಮಯ್ಯ ಅವರು ಈ ಸಂಘಟನೆಗಳ ವಿರುದ್ಧ ಇದ್ದ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ರಾಜ್ಯ ಸರಕಾರ ಈ ಪ್ರಕರಣಗಳ ಮರು ತನಿಖೆಗೆ ಮುಂದಾಗಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.
ಹಿಜಾಬ್ ಪರವಾಗಿ ನಿಂತ ಮತಾಂಧರ ಕೃತ್ಯದಿಂದ ಹರ್ಷನ ಹತ್ಯೆ ಆಗಿದೆ. ಇದೊಂದು ಪೂರ್ವಯೋಜಿತ ದುಷ್ಕೃತ್ಯ. ಗೋಮುಖ ವ್ಯಾಘ್ರರ ಕೃತ್ಯ. ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಾದಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೂ ದಾದಾಗಿರಿಯ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.
ಶೈಕ್ಷಣಿಕ ವಾತಾವರಣ ಹಾಳು ಮಾಡಿದ್ದನ್ನು ಖಂಡಿಸಿ ಮತ್ತು ಸದನದ ಕಲಾಪ ವ್ಯರ್ಥವಾಗುವಂತೆ ಮಾಡಿದ ಡಾ| ಅಂಬೇಡ್ಕರ್ ವಿರೋಧಿ, ಸಾವರ್ಕರ್ ವಿರೋಧಿ, ಜನವಿರೋಧಿ, ಹಿಂದೂ ವಿರೋಧಿ, ಶಿಕ್ಷಣ ದ್ರೋಹಿ, ಮಹಿಳಾ ವಿರೋಧಿ ಅಲ್ಲದೇ ಮತಾಂತರ ಪರ ಇರುವ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಢಲಾಗುವುದು ಎಂದ ಅವರು, ಹರ್ಷನ ಮನೆಗೆ ಹೋಗಲು ಕಾಂಗ್ರೆಸ್‌ನವರಿಗೆ ಸಮಯ ಇಲ್ಲ, ದಿಲ್ಲಿಗೆ ಹೋಗಲು ಸಮಯ ಇದೆ ಎಂದು ಆರೋಪಿಸಿದರು.
ಸಂವಿಧಾನ ವಿರೋಧಿ, ದಾದಾಗಿರಿ ಪರ ಇರುವ ಕಾಂಗ್ರೆಸ್ ಪಕ್ಷವು ಮತಾಂಧತೆಯನ್ನು ಪೋಷಿಸುತ್ತಿದೆ. ಹಿಂದೆ ಸಿಮಿ ಇತ್ತು. ಈಗ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಕೋವಿಡ್ ರೀತಿಯಲ್ಲಿ ಹಬ್ಬುತ್ತಿವೆ. ಇಂಥ ಸಮಾಜವಿರೋಧಿ ಸಂಘಟನೆಗಳ ವಿರುದ್ಧ ಕ್ರಮ ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವರಾದ ಡಾ| ಸಿ.ಎನ್. ಅಶ್ವತ್ಥನಾರಾಯಣ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.
ಹೈಕಮಾಂಡ್‌ಗೆ ವರದಿ ಸಲ್ಲಿಕೆ: ರವಿಕುಮಾರ್ :
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತು ಪಕ್ಷದ ಹೈಕಮಾಂಡ್‌ಗೆ ಶೀಘ್ರವೇ ರಾಜ್ಯ ಘಟಕದಿಂದ ವರದಿ ಸಲ್ಲಿಸಲಾಗುವುದು ಎಂದು ರವಿ ಕುಮಾರ್ ತಿಳಿಸಿದರು.
ಹಿಜಾಬ್ ವಿಚಾರದಲ್ಲಿ ಪಕ್ಷ ನಡೆದುಕೊಂಡ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿಸಲು ಪ್ರಯತ್ನಿಸಿರುವ ರೀತಿ, ರಾಷ್ಟ್ರಧ್ವಜ ಹಾಗೂ ಭಗವಾಧ್ವಜದ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳು, ಸದನದಲ್ಲಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ನಡೆಸಿರುವುದರ ಹಿಂದಿನ ಉದ್ದೇಶದ ಕುರಿತು ಪಕ್ಷದ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ವರದಿಯನ್ನು ಸಲ್ಲಿಸಲಾಗುವುದು ಎಂದರು.