ವಿಜಯಪುರ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರದ ಪತನಕ್ಕೆ “ಆಪರೇಷನ್ ಕಮಲ’ದ ಬಿರುಸಿನ ಚಟುವಟಿಕೆ ನಡೆದ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರಿಗೆ ಬಿಜೆಪಿ ಗಾಳ ಹಾಕಿದೆ.
ಶಾಸಕ ದೇವಾನಂದ ಚವ್ಹಾಣ ಅವರನ್ನು “ಆಪರೇಷನ್ ಕಮಲ’ದ ಮೂಲಕ ಬಿಜೆಪಿಗೆ ಸೆಳೆಯಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪತ್ನಿ ಡಾ| ಸುನಿತಾ ಅವರಿಗೆ ಗುದ್ದಾಡಿ ಟಿಕೆಟ್ ಪಡೆದರೂ ಸೋಲು ಅನುಭವಿಸಿದ್ದಾರೆ. ಪಕ್ಷದಲ್ಲಿ ಬಂಜಾರಾ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನವೇ ದೇವಾನಂದ ಅವರು ಬಿಜೆಪಿಯತ್ತ ಮುಖ ಮಾಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ದೇವಾನಂದ ಚವ್ಹಾಣರ ಬಿಜೆಪಿ ಸೇರ್ಪಡೆಗೆ ವಿಧಾನಸಭೆ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ ವಿರೋಧ ವ್ಯಕ್ತಪಡಿಸಿದ್ದಾರೆ. ದೇವಾನಂದ ಚವ್ಹಾಣ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರಜೋಳ ಪುತ್ರ ಗೋಪಾಲ ಸ್ಪರ್ಧಿಸಿ ಸೋತಿದ್ದಾರೆ.
ದೇವಾನಂದ ಬಿಜೆಪಿಗೆ ಸೇರ್ಪಡೆಯಾದರೆ ಮಗನನ್ನು ಶಾಸಕನನ್ನಾಗಿ ಮಾಡುವ ಕನಸು ಈಡೇರುವುದಿಲ್ಲ ಎಂಬ ಉದ್ದೇಶದಿಂದ ಯತ್ನಾಳ ಅವರ ಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಕ್ಷದ ಹಿರಿಯ ನಾಯಕರಿಗೆ ದೇವಾನಂದ ಅವರನ್ನು ಪಕ್ಷಕ್ಕೆ ಸೆಳೆಯುವ ವಿಷಯದಲ್ಲಿ ಯಾವ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
“ರಾಜಕೀಯವಾಗಿ ನನ್ನ ಬೆಳವಣಿಗೆ ಸಹಿಸದವರು ಇಂಥ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಾನು ಜೆಡಿಎಸ್ ತೊರೆಯುವ ಯಾವ ಉದ್ದೇಶ ಹೊಂದಿಲ್ಲ. ಪಕ್ಷದ ನಾಯಕರ ವಿರುದ್ಧ ನನಗೆ ಯಾವುದೇ ರೀತಿಯ ಅಸಮಾಧಾನ, ಅತೃಪ್ತಿ ಇಲ್ಲ. ಜೆಡಿಎಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಕಪೋಲ ಕಲ್ಪಿತ ಸುದ್ದಿ.
-ದೇವಾನಂದ ಚವ್ಹಾಣ, ನಾಗಠಾಣ ಶಾಸಕ