ದಾವಣಗೆರೆ: ಪಕ್ಷ ದೊಳಗಿನ ಗೊಂದಲಗಳ ಬಗ್ಗೆ ಯಾವುದೇ ಸಭೆ ನಡೆಸದಂತೆ, ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ವರಿಷ್ಠರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ರವಿವಾರ ದಾವಣಗೆರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವ ದಲ್ಲಿ ಕರೆದಿದ್ದ ಭಿನ್ನರ ಗುಪ್ತ ಸಭೆ ವಿಫಲಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಸ್ವಪಕ್ಷದವರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಲೇ ಬೆಳಗಾವಿ, ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆಸಿದ್ದ ಯತ್ನಾಳ್ ಬಳಗಕ್ಕೆ ದಾವಣಗೆರೆಯಲ್ಲಿ ಮುಖಂಡರ ಬೆಂಬಲ ಸಿಗಲಿಲ್ಲ. ಹೀಗಾಗಿ ಸಭೆಯನ್ನು ಸ್ಥಳೀಯವಾಗಿ ನಡೆದಿರುವ ಗಣೇಶನ ಮೆರವಣಿಗೆ ಮೇಲಿನ ಕಲ್ಲು ತೂರಾಟ ಘಟನೆಗೆ ಸೀಮಿತಗೊಳಿಸಲಾಯಿತು.
ಯತ್ನಾಳ್ ಬಳಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹ ನಿಗದಿಯಾಗಿದ್ದ ತಮ್ಮ ದಾವಣಗೆರೆ ಪ್ರವಾಸವನ್ನೇ ಮೊಟಕುಗೊಳಿಸಿದರು.
ಜಿಲ್ಲೆಯ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ರಾಜೇಶ್, ಪ್ರೊ| ಲಿಂಗಣ್ಣ ಅವರನ್ನೂ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರೆಲ್ಲರೂ ಸಭೆಯಿಂದ ದೂರ ಉಳಿದಿದ್ದರಿಂದ ಉದ್ದೇಶ ಈಡೇರಿಲ್ಲ ಎನ್ನಲಾಗಿದೆ.
ನಿರೀಕ್ಷಿತ ಮಟ್ಟದಲ್ಲಿ ಸಭೆ ಯಶಸ್ವಿಯಾಗದಿದ್ದರೂ ಯತ್ನಾಳ್ ಸ್ವಪಕ್ಷದವರ ವಿರುದ್ಧ ವಾಗ್ಧಾಳಿಯನ್ನು ನಿಲ್ಲಿಸಲಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಇದೆ. ಪಕ್ಷದ ಗೊಂದಲಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ರವಾನೆಯೂ ಆಗಿದ್ದು ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಪಕ್ಷದ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಈ ಹಿಂದೆ ಕುಮಾರ ಬಂಗಾರಪ್ಪ ಮನೆಯಲ್ಲಿ ಸಭೆ ಮಾಡಿದಾಗಲೇ ಏನು ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ, ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಹಾಗೂ ಸ್ಥಳೀಯ ಪ್ರಮುಖರಷ್ಟೇ ಭಾಗಿಯಾಗಿದ್ದರು.
ಆಂತರಿಕ ಚರ್ಚೆ ಇಲ್ಲ
-ಯತ್ನಾಳ್ ನೇತೃತ್ವದಲ್ಲಿ ನಡೆಯಬೇಕಿದ್ದ ಗುಪ್ತ ಸಭೆ
-ಯತ್ನಾಳ್, ಪ್ರತಾಪ್ ಸೇರಿ ಕೆಲವರು ಮಾತ್ರ ಭಾಗಿ
-ರಮೇಶ್ ಜಾರಕಿಹೊಳಿ, ಎಸ್.ವಿ. ರಾಮಚಂದ್ರ, ಲಿಂಗಣ್ಣ ಗೈರು